ನವದೆಹಲಿ: ಭಾರತದ ಉಪಗ್ರಹ ಸಂವಹನ ಕ್ಷೇತ್ರದಲ್ಲಿ ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸೇರಿದಂತೆ ಎಲ್ಲ ಕಂಪನಿಗಳ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (RIL) ತಿಳಿಸಿದೆ. ಆದರೆ, ದೇಶದಲ್ಲಿ ಕಾರ್ಯನಿರ್ವಹಿಸಲು ಬಯಸುವ ಎಲ್ಲ ಕಂಪನಿಗಳು ಕಾನೂನು ಮತ್ತು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದೆ.
ಭಾರತದಲ್ಲಿ ಸ್ಟಾರ್ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆ ಆರಂಭಿಸಲು ವಿಳಂಬವಾಗುತ್ತಿರುವ ವಿಚಾರವಾಗಿ ಸ್ಪೇಸ್ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಮುಖೇಶ್ ಅಂಬಾನಿ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ರಿಲಯನ್ಸ್ ಈ ಹೇಳಿಕೆ ನೀಡಿದೆ.

ಸ್ಪರ್ಧೆಗೆ ನಾವು ಹೆದರುವುದಿಲ್ಲ
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಭಾರತವು ದೇಶೀಯ ಹಾಗೂ ವಿದೇಶಿ ಹೂಡಿಕೆ ಮತ್ತು ಹೊಸ ತಂತ್ರಜ್ಞಾನಗಳನ್ನು ಸ್ವಾಗತಿಸುವ ದೇಶವಾಗಿದೆ ಎಂದು ತಿಳಿಸಿದೆ. ಆದರೆ, ಈ ಮುಕ್ತ ವಾತಾವರಣದಲ್ಲಿ ಕಾನೂನಿನ ಪಾಲನೆಗೆ ಹೆಚ್ಚಿನ ಮಹತ್ವವಿದೆ. ಭಾರತೀಯ ಕಂಪನಿಗಳಾಗಲಿ, ವಿದೇಶಿ ಕಂಪನಿಗಳಾಗಲಿ ಎಲ್ಲರಿಗೂ ಒಂದೇ ರೀತಿಯ ನಿಯಮಗಳು ಅನ್ವಯಿಸುತ್ತವೆ ಎಂದು ಹೇಳಿದೆ.
ಜಿಯೋ ಸೇರಿದಂತೆ ಪ್ರತಿಯೊಂದು ಕಂಪನಿಯೂ ದೇಶದ ಕಾನೂನು ಮತ್ತು ನೀತಿಗಳನ್ನು ಪಾಲಿಸಬೇಕು. ಅಷ್ಟೇ ಅಲ್ಲ, ರಿಲಯನ್ಸ್ನ ಸ್ವಂತ ಉಪಗ್ರಹ ಸಂವಹನ ಸೇವೆಗಳಿಗೂ ಇನ್ನೂ ಅಗತ್ಯ ಅನುಮತಿಗಳು ದೊರೆತಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಸ್ಪರ್ಧೆಗೆ ತಾನು ಎಂದಿಗೂ ಹೆದರಿಲ್ಲ ಎಂದಿರುವ ರಿಲಯನ್ಸ್, ಗ್ರಾಹಕರಿಗೆ ಯಾರು ಅತ್ಯುತ್ತಮ ಸೇವೆ ಒದಗಿಸುತ್ತಾರೆ ಎಂಬುದನ್ನು ನಿರ್ಧರಿಸುವುದೇ ನಿಜವಾದ ಸ್ಪರ್ಧೆ ಎಂದು ಹೇಳಿದೆ.
2016ರಲ್ಲಿ ಜಿಯೋ ಭಾರತೀಯ ದೂರಸಂಪರ್ಕ ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ ಡಿಜಿಟಲ್ ಸೇವೆಗಳ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿದೆ. ಪ್ರಸ್ತುತ 53 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದ್ದು, ಕೈಗೆಟುಕುವ ದರದಲ್ಲಿ ಡೇಟಾ ಸೇವೆಗಳನ್ನು ಒದಗಿಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಅಂಬಾನಿ ವಿರುದ್ಧ ಮಸ್ಕ್ ಆರೋಪ
ಇತ್ತೀಚಿನ ದಿನಗಳಲ್ಲಿ ಎಲಾನ್ ಮಸ್ಕ್ ಅವರು ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ರಿಲಯನ್ಸ್ ಏಕಸ್ವಾಮ್ಯ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸ್ಟಾರ್ಲಿಂಕ್ ಭಾರತೀಯ ಮಾರುಕಟ್ಟೆ ಪ್ರವೇಶಿಸುವುದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಯಾಗುತ್ತಿವೆ ಎಂದೂ ದೂರಿದ್ದಾರೆ.
ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾದರೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ಲಾಭ ಕಡಿಮೆಯಾಗಬಹುದು. ಆದರೆ, ಅದರಿಂದ ಅವುಗಳ ಉದ್ಯಮಕ್ಕೆ ಅಪಾಯ ಎದುರಾಗುತ್ತದೆ ಎಂದೇನಿಲ್ಲ ಎಂದು ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ.
ಸ್ಪರ್ಧೆಯಿಂದ ಭಾರತೀಯ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿವೆ. ಇದರಿಂದ ಜನರಿಗೆ ಅನುಕೂಲವಾಗಲಿದ್ದು, ಮುಖೇಶ್ ಅಂಬಾನಿ ಅವರ ಲಾಭ ಕಡಿಮೆಯಾಗಬಹುದೇ ಹೊರತು ಅವರ ಉದ್ಯಮ ಮುಚ್ಚಿಹೋಗುವುದಿಲ್ಲ ಎಂದು ಮಸ್ಕ್ ಎಕ್ಸ್ನಲ್ಲಿ ಬರೆದಿದ್ದರು.
ಇದಕ್ಕೂ ಮೊದಲು ಅಂಬಾನಿ ಅವರನ್ನು ವ್ಯಂಗ್ಯವಾಗಿ ‘ಪ್ರಧಾನಿ ಅಂಬಾನಿ’ ಎಂದು ಸಂಬೋಧಿಸಿದ್ದ ಮಸ್ಕ್, ಏಕಸ್ವಾಮ್ಯವನ್ನು ರಕ್ಷಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಭಾರತದಲ್ಲಿ ಸ್ಟಾರ್ಲಿಂಕ್ ಸೇವೆಗಳಿಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಅಂಬಾನಿ ಯೋಚಿಸಬಹುದೇ ಎಂದೂ ಪ್ರಶ್ನಿಸಿದ್ದರು.
ಭಾರತದಲ್ಲಿ ಸ್ಟಾರ್ಲಿಂಕ್ ಸೇವೆ ಆರಂಭಿಸಲು ಅಗತ್ಯ ಅನುಮತಿಗಳು ಮತ್ತು ನಿಯಂತ್ರಣಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದ್ದು, ಈ ವಿಚಾರ ಈಗ ಉದ್ಯಮ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
Statement from Reliance Industries
In light of recent remarks about Reliance and the Indian market, we wish to place the facts on record.
Like every Indian enterprise, Reliance has grown in an India that welcomes investment and innovation, homegrown or international, that improve the lives of the people.
That openness rests on the rule of law. As the Government of India has stated, it applies the same process to every applicant, Indian or foreign. Jio’s own satellite services await clearances.
At Reliance, we have never feared competition. We see it as the truest test of who serves the customer best. Jio itself entered India’s crowded telecom market in 2016 as the newest player, with not a single customer. In just ten years, Jio has earned the trust of over 530 million customers and given Indians some of the best digital infrastructure and most affordable data in the world.
We welcome competition in satellite communications, including Starlink. Every player, Jio included, must serve the people of India and abide by the laws and policies of the land.
— Reliance Industries Limited (@RIL_Updates) October 16, 2026

