ಬೆಂಗಳೂರು: ಕರ್ನಾಟಕದ ಕರಾವಳಿ ಪ್ರದೇಶವನ್ನು ಪ್ರವಾಸೋದ್ಯಮ, ವಾಣಿಜ್ಯ, ಹೂಡಿಕೆ ಮತ್ತು ಉದ್ಯೋಗದ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಖ್ಯಾತ ಸಮಾಜ ಸೇವಕ, ಪರೋಪಕಾರಿ ಹಾಗೂ ಎನ್‌ಆರ್‌ಐ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರು ರಾಜ್ಯ ಸರ್ಕಾರಕ್ಕೆ ಸಮಗ್ರ ಅಭಿವೃದ್ಧಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಡಾ. ಕೊಲಾಸೊ ಅವರು ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಅವರ ಸಮ್ಮುಖದಲ್ಲಿ ಪ್ರಸ್ತಾವನೆಯ ಪ್ರಮುಖ ಅಂಶಗಳನ್ನು ಮಂಡಿಸಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕರಾವಳಿ ಕರ್ನಾಟಕವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಹಾಗೂ ಹೂಡಿಕೆ ತಾಣವಾಗಿ ರೂಪಿಸುವುದು ಪ್ರಸ್ತಾವನೆಯ ಪ್ರಮುಖ ಉದ್ದೇಶವಾಗಿದೆ.

20–25 ವರ್ಷಗಳ ಮಾಸ್ಟರ್‌ಪ್ಲಾನ್:
ಕರಾವಳಿ ಅಭಿವೃದ್ಧಿಗೆ ತಜ್ಞರು, ಅಧಿಕಾರಿಗಳು, ಪ್ರವಾಸೋದ್ಯಮ ಪರಿಣಿತರು, ನಗರ ಯೋಜಕರು, ಉದ್ಯಮಿಗಳು, ಬಂದರು ಮತ್ತು ಸಾರಿಗೆ ತಜ್ಞರು ಹಾಗೂ ಎನ್‌ಆರ್‌ಐ ಪ್ರತಿನಿಧಿಗಳನ್ನು ಒಳಗೊಂಡ ಕರ್ನಾಟಕ ಕರಾವಳಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಅಭಿವೃದ್ಧಿ ಟಾಸ್ಕ್ ಫೋರ್ಸ್ ರಚಿಸುವಂತೆ ಸಲಹೆ ನೀಡಲಾಗಿದೆ.
ಮುಂದಿನ 20ರಿಂದ 25 ವರ್ಷಗಳ ಅವಧಿಗೆ ಸಮಗ್ರ ಮಾಸ್ಟರ್‌ಪ್ಲಾನ್ ರೂಪಿಸಿ, ಬೀಚ್ ಪ್ರವಾಸೋದ್ಯಮ, ರೆಸಾರ್ಟ್‌ಗಳು, ಕನ್ವೆನ್ಷನ್ ಸೆಂಟರ್‌ಗಳು, ಮರೀನಾ, ಜಲಕ್ರೀಡೆ, ವಾಟರ್‌ಫ್ರಂಟ್‌ಗಳು, ವಾಟರ್ ಟ್ಯಾಕ್ಸಿ, ವಾಣಿಜ್ಯ ಕೇಂದ್ರಗಳು, ಲಾಜಿಸ್ಟಿಕ್ಸ್ ಹಾಗೂ ಪ್ರವಾಸೋದ್ಯಮ ಆಧಾರಿತ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದಾಗಿದೆ.

ಪರಿಸರ ಸಂರಕ್ಷಣೆಗೆ ಒತ್ತು:
ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಪ್ರಸ್ತಾವಿಸಲಾಗಿದೆ. ಮ್ಯಾಂಗ್ರೂವ್‌ಗಳು, ಜಲಭೂಮಿಗಳು, ನೈಸರ್ಗಿಕ ಜಲಮಾರ್ಗಗಳು, ಕಡಲತೀರಗಳು ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸುವುದರ ಜತೆಗೆ, ಹೊಸ ಯೋಜನೆಗಳಿಂದ ಸಂಸ್ಕರಿಸದ ಕೊಳಚೆ ನೀರು ಸಮುದ್ರ ಅಥವಾ ಹಿನ್ನೀರಿಗೆ ಸೇರುವುದನ್ನು ಸಂಪೂರ್ಣವಾಗಿ ತಡೆಯುವ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.
ದುಬೈ, ಸಿಂಗಾಪುರ, ಮಲೇಷ್ಯಾ, ಹಾಂಗ್‌ಕಾಂಗ್, ಸ್ಪೇನ್ ಮತ್ತು ಇಟಲಿಯಂತಹ ಯಶಸ್ವಿ ಕರಾವಳಿ ನಗರಗಳ ಅಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡಿ, ಕರ್ನಾಟಕದ ಪರಿಸರ ಹಾಗೂ ಕಾನೂನು ವ್ಯವಸ್ಥೆಗೆ ಹೊಂದುವ ಮಾದರಿಯನ್ನು ರೂಪಿಸುವಂತೆ ಡಾ. ಕೊಲಾಸೊ ಸಲಹೆ ನೀಡಿದ್ದಾರೆ.
ಕರಾವಳಿ ಅಭಿವೃದ್ಧಿಯ ಮೂಲಕ ಸ್ಥಳೀಯ ಯುವಕರು, ಮೀನುಗಾರರು, ರೈತರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು ಮತ್ತು ಮಹಿಳಾ ಉದ್ಯಮಿಗಳಿಗೆ ಉದ್ಯೋಗ ಹಾಗೂ ಉದ್ಯಮಾವಕಾಶಗಳನ್ನು ಹೆಚ್ಚಿಸುವುದಕ್ಕೂ ಪ್ರಸ್ತಾವನೆಯಲ್ಲಿ ಒತ್ತು ನೀಡಲಾಗಿದೆ.
ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿರುವ ಕನ್ನಡಿಗರು ಹಾಗೂ ಎನ್‌ಆರ್‌ಐ ಹೂಡಿಕೆದಾರರನ್ನು ಕರಾವಳಿ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶವನ್ನೂ ಪ್ರಸ್ತಾವನೆ ಒಳಗೊಂಡಿದೆ.
ಪ್ರಸ್ತಾವನೆ ಅನುಷ್ಠಾನಗೊಂಡಲ್ಲಿ ಕರಾವಳಿ ಕರ್ನಾಟಕದ ಪ್ರವಾಸೋದ್ಯಮ, ಮೂಲಸೌಕರ್ಯ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಹೊಸ ದಿಕ್ಕು ದೊರೆಯುವ ಸಾಧ್ಯತೆಯಿದೆ.

