ನವದೆಹಲಿ: ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRB) 2025–26ನೇ ಹಣಕಾಸು ವರ್ಷದಲ್ಲಿ ಸಾಲ ವಿತರಣೆಯಲ್ಲಿ ಗಮನಾರ್ಹ ಬೆಳವಣಿಗೆ ದಾಖಲಿಸಿವೆ. RRBಗಳ ಒಟ್ಟು ಸಾಲ ಬಾಕಿ ಶೇ.10.3ರಷ್ಟು ಹೆಚ್ಚಾಗಿ ₹5.78 ಲಕ್ಷ ಕೋಟಿಗೆ ತಲುಪಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
2024–25ರಲ್ಲಿ ₹5.24 ಲಕ್ಷ ಕೋಟಿಯಷ್ಟಿದ್ದ ಒಟ್ಟು ಸಾಲವು 2025–26ರಲ್ಲಿ ₹5.78 ಲಕ್ಷ ಕೋಟಿಗೆ ಏರಿಕೆಯಾಗಿದೆ. ಗ್ರಾಮೀಣ ಆರ್ಥಿಕತೆ ಮತ್ತು ಆರ್ಥಿಕ ಸೇರ್ಪಡೆಗೆ RRBಗಳ ಕೊಡುಗೆ ಮುಂದುವರಿದಿರುವುದನ್ನು ಈ ಬೆಳವಣಿಗೆ ಪ್ರತಿಬಿಂಬಿಸುತ್ತದೆ.
RBI ನಿಗದಿಪಡಿಸಿರುವ ಶೇ.75ರ ಆದ್ಯತಾ ವಲಯ ಸಾಲ (PSL) ಗುರಿಗೆ ಹೋಲಿಸಿದರೆ, RRBಗಳು ಹೊಂದಾಣಿಕೆಯ ನಿವ್ವಳ ಬ್ಯಾಂಕ್ ಸಾಲದ (ANBC) ಸರಾಸರಿ ಶೇ.91.7ರಷ್ಟು ಸಾಧನೆ ಮಾಡಿವೆ. ಬಹುತೇಕ RRBಗಳು ನಿಗದಿತ PSL ಗುರಿ ತಲುಪಿವೆ.
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ನೀಡಿರುವ ಸಾಲ ₹3.78 ಲಕ್ಷ ಕೋಟಿಯಾಗಿದ್ದು, ಒಟ್ಟು PSLನ ಶೇ.77ರಷ್ಟಿದೆ. ಇದರ ಬಹುಪಾಲು ಬೆಳೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹರಿದಿದೆ.

MSME ವಲಯಕ್ಕೆ RRBಗಳು ₹66,978 ಕೋಟಿ ಸಾಲ ನೀಡಿದ್ದು, ಒಟ್ಟು PSLನ ಶೇ.13.6ರಷ್ಟಾಗಿದೆ. ಈ ಪೈಕಿ ಶೇ.95ಕ್ಕೂ ಹೆಚ್ಚು ಸಾಲವು ಸೂಕ್ಷ್ಮ ಉದ್ಯಮಗಳಿಗೆ ನೀಡಲಾಗಿದೆ.
ದುರ್ಬಲ ವರ್ಗಗಳಿಗೆ ನೀಡಿರುವ ಸಾಲ ₹3.49 ಲಕ್ಷ ಕೋಟಿಗೆ ತಲುಪಿದೆ. ವಸತಿ, ಶಿಕ್ಷಣ, ನವೀಕರಿಸಬಹುದಾದ ಇಂಧನ ಹಾಗೂ ಸಾಮಾಜಿಕ ಮೂಲಸೌಕರ್ಯ ಕ್ಷೇತ್ರಗಳಿಗೂ RRBಗಳು ಸಾಲ ಸೌಲಭ್ಯ ಮುಂದುವರಿಸಿವೆ.
ಗ್ರಾಮೀಣ ಪ್ರದೇಶಗಳಲ್ಲಿ ರೈತರು, ಸೂಕ್ಷ್ಮ ಉದ್ಯಮಗಳು ಹಾಗೂ ಸೇವೆ ದೊರೆಯದ ವರ್ಗಗಳಿಗೆ ಸಾಂಸ್ಥಿಕ ಸಾಲ ಒದಗಿಸುವಲ್ಲಿ RRBಗಳ ಪಾತ್ರ ಮತ್ತಷ್ಟು ಬಲಗೊಂಡಿದೆ ಎಂದು ಸರ್ಕಾರ ತಿಳಿಸಿದೆ.

