ಬೆಂಗಳೂರು: ಸಾಧನಾದ 5ನೇ ಬ್ಯಾಚಿನಲ್ಲಿ (2021-23) ಮೊದಲಿಗಳಾಗಿರುವ, ಮಂಡ್ಯದ ರಿತ್ವಿಜಾ ದೇವೇಗೌಡ ಪುಣೆಯ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜಿನಲ್ಲಿ (ಎ.ಎಫ್.ಎಂ.ಸಿ) ಪ್ರವೇಶವನ್ನು ಪಡೆದು ಗಮನಸೆಳೆದಿದ್ದಾಳೆ.
ಎ.ಎಫ್.ಎಂ.ಸಿ.ಯಲ್ಲಿ ಪ್ರತಿವರ್ಷ ಭಾರತದಾದ್ಯಂತದ 30 ವಿದ್ಯಾರ್ಥಿನಿಯರನ್ನು ಎಂ.ಬಿ.ಬಿ.ಎಸ್. ಕೋರ್ಸ್‌ಗೆ ಆಯ್ಕೆ ಮಾಡಲಾಗುತ್ತದೆ. ಈ ಬಾರಿ 300 ವಿದ್ಯಾರ್ಥಿನಿಯರ ಪೈಕಿ ಅಂತಿಮವಾಗಿ ಆಯ್ಕೆಯಾದ 30 ವಿದ್ಯಾರ್ಥಿನಿಯರಲ್ಲಿ ರಿತ್ವಿಜಾ ಒಬ್ಬಳಾಗಿದ್ದಾಳೆ.
ರೈತಾಪಿ ಕುಟುಂಬದಿಂದ ಬಂದಿರುವ ರಿತ್ವಿಜಾ ಎ.ಎಫ್.ಎಂ.ಸಿ.ಗೆ ಈ ಬಾರಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಹಾಗೂ ‘ಸಾಧನಾ’ ಯೋಜನೆಯಿಂದ ಮೊದಲ ವಿದ್ಯಾರ್ಥಿನಿಯಾಗಿದ್ದಾಳೆ. ನೀಟ್ ಪರೀಕ್ಷೆಯಲ್ಲಿ ರಿತ್ವಿಜಾ 720ರಲ್ಲಿ 670 ಅಂಕಗಳನ್ನು ಪಡೆದಿದ್ದಾಳೆ.
ಏನಿದು ಸಾಧನಾ.?
‘ಸಾಧನಾ* ಇದು ರಾಷ್ಟ್ರೋತ್ಥಾನ ಪರಿಷತ್ತಿನ ಅಪೂರ್ವ ಯೋಜನೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಚಿಂತನೆಯನ್ನು ಸದಾ ಆದ್ಯತೆಯಲ್ಲಿಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್ ಈ ‘ಸಾಧನಾ’ ಎಂಬ ಯೋಜನೆಯನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದೆ. ಈ ಯೋಜನೆಯಲ್ಲಿ ಆರ್ಥಿಕ ಅನನುಕೂಲತೆ ಹೊಂದಿರುವ, ಗ್ರಾಮೀಣ ಪ್ರದೇಶದ ಹಾಗೂ ವೈದ್ಯಕೀಯ ಶಿಕ್ಷಣವನ್ನು ಪಡೆಯುವ ಇಚ್ಛೆ ಹೊಂದಿರುವ ಪ್ರತಿಭಾವಂತ ಹೆಣ್ಣುಮಕ್ಕಳನ್ನು ಹಲವು ಹಂತಗಳ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆ ಹೆಣ್ಣು ಮಕ್ಕಳಿಗೆ ಎರಡು ವರ್ಷ ಪದವಿಪೂರ್ವ ಶಿಕ್ಷಣ, ವೈದ್ಯಕೀಯ ಪ್ರವೇಶ ಪರೀಕ್ಷೆಗಳ ತರಬೇತಿ (CET, NEET) ಹಾಗೂ ಉಚಿತ ಊಟ-ವಸತಿಗಳ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.
2017ರಿಂದ ಪ್ರಾರಂಭವಾಗಿರುವ ‘ಸಾಧನಾ’ಗೆ BASE ಸಂಸ್ಥೆಯ ಶೈಕ್ಷಣಿಕ ಸಹಕಾರವಿದೆ. ಈವರೆಗೆ 4 ಬ್ಯಾಚುಗಳಲ್ಲಿ ಸುಮಾರು 200 ವಿದ್ಯಾರ್ಥಿನಿಯರು ಈ ಯೋಜನೆಯ ಪ್ರಯೋಜನ ಪಡೆದಿದ್ದು, 54 ಮಂದಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ.