‘ಸಂಚಾರ್ ಸಾಥಿ’ ಪೋರ್ಟಲ್‌ ಮೂಲಕ ₹5,000 ಕೋಟಿಗೂ ಅಧಿಕ ಸೈಬರ್ ವಂಚನೆ ತಡೆಗೆ ನೆರವು

ನವದೆಹಲಿ: ದೂರಸಂಪರ್ಕ ವಂಚನೆಗಳ ವಿರುದ್ಧ ನಾಗರಿಕರ ಜಾಗೃತಿ ಮತ್ತು ಭಾಗವಹಿಸುವಿಕೆ ಹೆಚ್ಚುತ್ತಿರುವ ನಡುವೆ, 2023ರ ಮೇನಲ್ಲಿ ಆರಂಭವಾದ ಕೇಂದ್ರ ಸರ್ಕಾರದ ‘ಸಂಚಾರ್ ಸಾಥಿ’ ಪೋರ್ಟಲ್ 30 ಕೋಟಿಗೂ ಅಧಿಕ ಭೇಟಿಗಳ ಮೈಲಿಗಲ್ಲು ತಲುಪಿದೆ. ನಾಗರಿಕರಿಂದ ದೊರೆಯುತ್ತಿರುವ ಮಾಹಿತಿಯು ದೂರಸಂಪರ್ಕ ಸಂಬಂಧಿತ ವಂಚನೆಗಳನ್ನು ತಡೆಯುವ ಪ್ರಯತ್ನಗಳಿಗೆ ಪ್ರಮುಖ ನೆರವು ನೀಡುತ್ತಿದೆ ಎಂದು ದೂರಸಂಪರ್ಕ ಇಲಾಖೆ (DoT) ತಿಳಿಸಿದೆ.

ಅನುಮಾನಾಸ್ಪದ ಕರೆಗಳು ಮತ್ತು ಸಂದೇಶಗಳ ಕುರಿತು ದೂರು ನೀಡುವುದು, ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸುವುದು, ಕಳೆದುಹೋದ ಅಥವಾ ಕಳುವಾದ ಮೊಬೈಲ್‌ಗಳನ್ನು ಬ್ಲಾಕ್ ಮಾಡುವುದು ಹಾಗೂ IMEI ಸಂಖ್ಯೆಯ ಮೂಲಕ ಮೊಬೈಲ್ ಸಾಧನಗಳ ಅಸಲಿಯತ್ತನ್ನು ಪರಿಶೀಲಿಸುವಂತಹ ಹಲವು ಸೇವೆಗಳನ್ನು ಪೋರ್ಟಲ್ ಒದಗಿಸುತ್ತದೆ.

ದೂರಸಂಪರ್ಕ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದುಹೋದ ಅಥವಾ ಕಳುವಾದ 60.96 ಲಕ್ಷ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲಾಗಿದೆ. ಈ ಪೈಕಿ 37.85 ಲಕ್ಷ ಫೋನ್‌ಗಳನ್ನು ಪತ್ತೆಹಚ್ಚಲಾಗಿದ್ದು, 14 ಲಕ್ಷಕ್ಕೂ ಅಧಿಕ ಮೊಬೈಲ್‌ಗಳನ್ನು ಮರುಪಡೆಯಲಾಗಿದೆ. ತಮ್ಮ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳ ಕುರಿತು ಪರಿಶೀಲನೆ ಮತ್ತು ವರದಿಗಾಗಿ ನಾಗರಿಕರಿಂದ ಬಂದ ನಾಲ್ಕು ಕೋಟಿಗೂ ಅಧಿಕ ಮನವಿಗಳನ್ನು ಇತ್ಯರ್ಥಪಡಿಸಲಾಗಿದೆ.

‘ಚಕ್ಷು’ ಸೌಲಭ್ಯದ ಮೂಲಕ ಸಂಭಾವ್ಯ ವಂಚನೆಯ ಸಂವಹನಗಳ ಕುರಿತು 12.80 ಲಕ್ಷ ವರದಿಗಳು ಸ್ವೀಕರಿಸಲಾಗಿದ್ದು, ಅವುಗಳ ಆಧಾರದ ಮೇಲೆ 59.82 ಲಕ್ಷ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 50 ಲಕ್ಷಕ್ಕೂ ಅಧಿಕ ಮೊಬೈಲ್ ಸಂಪರ್ಕಗಳ ರದ್ದತಿಯೂ ಸೇರಿದೆ.

ನಾಗರಿಕರಿಂದ ಲಭ್ಯವಾಗುವ ಮಾಹಿತಿಯು ‘ಫೈನಾನ್ಶಿಯಲ್ ಫ್ರಾಡ್ ರಿಸ್ಕ್ ಇಂಡಿಕೇಟರ್’ (FRI) ವ್ಯವಸ್ಥೆಗೂ ನೆರವಾಗುತ್ತಿದೆ. ಹಣಕಾಸು ವಂಚನೆಗೆ ಸಂಬಂಧಿಸಿರಬಹುದಾದ ಮೊಬೈಲ್ ಸಂಖ್ಯೆಗಳ ಕುರಿತು ಅಪಾಯದ ಮಾಹಿತಿಯನ್ನು ಒದಗಿಸುವ ಈ ವ್ಯವಸ್ಥೆಯು ₹5,000 ಕೋಟಿಗೂ ಹೆಚ್ಚಿನ ಸಂಭಾವ್ಯ ಸೈಬರ್ ವಂಚನೆ ನಷ್ಟವನ್ನು ತಡೆಯಲು ನೆರವಾಗಿದೆ ಎಂದು DoT ತಿಳಿಸಿದೆ.

‘ಸಂಚಾರ್ ಸಾಥಿ’ ವ್ಯವಸ್ಥೆಯು ‘ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್’ ಮೂಲಕ 1,600ಕ್ಕೂ ಅಧಿಕ ಪಾಲುದಾರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದೆ. ದೂರಸಂಪರ್ಕ ಸೇವಾ ಪೂರೈಕೆದಾರರು, ಬ್ಯಾಂಕುಗಳು, ಪಾವತಿ ಸೇವಾ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಇದು ನೆರವಾಗುತ್ತಿದೆ.

ಇದೇ ವೇಳೆ, ‘ಸಂಚಾರ್ ಸಾಥಿ’ ಮೊಬೈಲ್ ಆ್ಯಪ್ ಇಂಗ್ಲಿಷ್, ಹಿಂದಿ ಸೇರಿದಂತೆ 21 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದ್ದು, ಇದರ ಡೌನ್‌ಲೋಡ್‌ಗಳ ಸಂಖ್ಯೆ 2.8 ಕೋಟಿಗೂ ಅಧಿಕವಾಗಿದೆ.

ಅನುಮಾನಾಸ್ಪದ ಕರೆಗಳು, ಎಸ್‌ಎಂಎಸ್ ಹಾಗೂ ವಾಟ್ಸಾಪ್ ಸಂದೇಶಗಳ ಕುರಿತು ಪೋರ್ಟಲ್ ಅಥವಾ ಆ್ಯಪ್ ಮೂಲಕ ವರದಿ ಮಾಡುವಂತೆ ದೂರಸಂಪರ್ಕ ಇಲಾಖೆ ನಾಗರಿಕರಿಗೆ ಮನವಿ ಮಾಡಿದೆ. ಸೈಬರ್ ವಂಚನೆಯಿಂದ ಹಣ ಕಳೆದುಕೊಂಡವರು ತಕ್ಷಣವೇ 1930 ಸಹಾಯವಾಣಿ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕ ದೂರು ದಾಖಲಿಸುವಂತೆ ಇಲಾಖೆ ಸೂಚಿಸಿದೆ.

Related posts