ಶಿವಮೊಗ್ಗ: ಮರಳು ಗಣಿಗಾರಿಕೆ ನಿಯಮ ಉಲ್ಲಂಘಿಸಿದ ಜಿಲ್ಲೆಯ 28 ಗುತ್ತಿಗೆದಾರರಿಗೆ ಸರ್ಕಾರ ಒಟ್ಟು ₹68 ಕೋಟಿಗೂ ಅಧಿಕ ದಂಡ ವಿಧಿಸುವ ನೋಟಿಸ್ ನೀಡಿದೆ.
ವಿಧಾನ ಪರಿಷತ್ನಲ್ಲಿ ಎಂಎಲ್ಸಿ ಬಲ್ಖೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಅಕ್ರಮ ಗಣಿಗಾರಿಕೆ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ದಬ್ಬನಗದ್ದೆ ಗ್ರಾಮದಲ್ಲಿ 2,116 ಮೆಟ್ರಿಕ್ ಟನ್ ಮರಳನ್ನು ಅಕ್ರಮವಾಗಿ ತೆಗೆದ ಪ್ರಕರಣದಲ್ಲಿ ₹1.08 ಕೋಟಿ ದಂಡ ವಿಧಿಸಲು ನೋಟಿಸ್ ನೀಡಲಾಗಿದೆ. ಬಾಕಿ ದಂಡದ ಮೊತ್ತದ ಕುರಿತು ಜಿಲ್ಲಾಮಟ್ಟದ ಮರಳು ಸಮಿತಿ ಮೂಲಕ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

2016ರ ತಿದ್ದುಪಡಿ ನಿಯಮಗಳಡಿ ಜಿಲ್ಲೆಯಲ್ಲಿ 38 ಮರಳು ಗಣಿಗಾರಿಕೆ ಗುತ್ತಿಗೆಗಳಿಗೆ ಅನುಮೋದನೆ ನೀಡಲಾಗಿತ್ತು. ಈ ಪೈಕಿ 34 ಗುತ್ತಿಗೆಗಳ ಅವಧಿ ಮುಗಿದಿದ್ದು, ನಾಲ್ಕು ಗುತ್ತಿಗೆಗಳು ಪ್ರಸ್ತುತ ಜಾರಿಯಲ್ಲಿವೆ.
2023ರ ತಿದ್ದುಪಡಿ ನಿಯಮದಡಿ ಜಿಲ್ಲೆಯಲ್ಲಿ 31 ಮರಳು ಬ್ಲಾಕ್ಗಳನ್ನು ಗುರುತಿಸಲಾಗಿದೆ. ಎಂಟು ಬ್ಲಾಕ್ಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮೀಸಲಿಡಲಾಗಿದ್ದು, ಉಳಿದ ಬ್ಲಾಕ್ಗಳನ್ನು ಟೆಂಡರ್-ಕಮ್-ಹರಾಜು ಮೂಲಕ ಹಂಚಿಕೆ ಮಾಡಲಾಗಿದೆ. 20 ಬ್ಲಾಕ್ಗಳ ಪ್ರಕ್ರಿಯೆ ಪೂರ್ಣಗೊಂಡಿದ್ದು, ಯಶಸ್ವಿ ಬಿಡ್ದಾರರಿಗೆ ಉದ್ದೇಶ ಪತ್ರ ನೀಡಲಾಗಿದೆ.
ಪರಿಸರ ಅನುಮತಿ ದೊರೆತ ಬಳಿಕವಷ್ಟೇ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆ. ಅಕ್ರಮ ಗಣಿಗಾರಿಕೆ, ಸಾಗಾಟ ಹಾಗೂ ದಾಸ್ತಾನು ತಡೆಯಲು ಕಂದಾಯ, ಅರಣ್ಯ, ಪೊಲೀಸ್ ಮತ್ತು ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.

