ಬೆಂಗಳೂರು: ದೀಪಾವಳಿ ಹಬ್ಬದ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಒದಗಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತು ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರೈಲು ಸಂಖ್ಯೆ 06551 ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 7 ಮತ್ತು 9ರಂದು ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ.

ರೈಲು ಸಂಖ್ಯೆ 06552 ಬೆಳಗಾವಿ–ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 8 ಮತ್ತು 10ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5 ಗಂಟೆಗೆ ಬೆಂಗಳೂರು ತಲುಪಲಿದೆ.
ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೊಂಡಾ ಹಾಗೂ ಖಾನಾಪುರ ನಿಲ್ದಾಣಗಳಲ್ಲಿ ರೈಲುಗಳು ನಿಲುಗಡೆ ಹೊಂದಲಿವೆ. ಎರಡೂ ಮಾರ್ಗಗಳಲ್ಲಿ ತಲಾ ಎರಡು ಟ್ರಿಪ್‌ಗಳು ಸಂಚರಿಸಲಿವೆ.
ದೀಪಾವಳಿ ಸಂದರ್ಭದಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿ ನಡುವೆ ಪ್ರಯಾಣಿಸುವವರಿಗೆ ಈ ಸೇವೆಯಿಂದ ಅನುಕೂಲವಾಗಲಿದೆ ಎಂದು ಜೋಶಿ ತಿಳಿಸಿದ್ದಾರೆ.

