ಮಂಡ್ಯ: ಜಾನಪದ ಕಲೆ ಹಾಗೂ ನಮ್ಮ ಮೂಲ ಸಂಸ್ಕೃತಿ ಶಾಶ್ವತವಾಗಿ ಉಳಿಯಬೇಕಾದರೆ ರಾಜ್ಯದ ಎಲ್ಲ ಭಾಗಗಳಲ್ಲಿಯೂ ಇಂತಹ ಜಾನಪದ ಮಹೋತ್ಸವಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದು ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಶ್ರೀ ಆದಿಚುಂಚನಗಿರಿ ಕ್ಷೇತ್ರದ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 53ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ, ಶ್ರೀ ಗುರು ಸಂಸ್ಮರಣೋತ್ಸವ ಹಾಗೂ 47ನೇ ವರ್ಷದ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾನಪದ ಕಲೆ ನಮ್ಮ ನಾಡಿನ ಮೂಲ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ. ಇಂತಹ ಕಲೆಗಳನ್ನು ಉಳಿಸಿ ಬೆಳೆಸಲು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಮಠವು ಕಲಾವಿದರನ್ನು ಗೌರವಿಸುವುದರ ಜತೆಗೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಸಚಿವರು ಹೇಳಿದರು.
ಕಲೆ, ಸಂಸ್ಕಾರ, ಸಂಸ್ಕೃತಿ, ಶಿಕ್ಷಣ ಹಾಗೂ ಅನ್ನದಾನದಂತಹ ವಿವಿಧ ಕ್ಷೇತ್ರಗಳಲ್ಲಿ ಆದಿಚುಂಚನಗಿರಿ ಮಠವು ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಮಠವು ಇತರ ಧಾರ್ಮಿಕ ಸಂಸ್ಥೆಗಳಿಗೆ ಮಾದರಿಯಾಗಿದ್ದು, ಈ ಸೇವಾ ಕಾರ್ಯಗಳು ಮುಂದೆಯೂ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು.

ನಿಷ್ಕಲ್ಮಷ ಭಕ್ತಿ ಮತ್ತು ಪ್ರಾರ್ಥನೆಗೆ ಸದಾ ವಿಶೇಷ ಸ್ಥಾನವಿದೆ. ಹಣ ಹಾಗೂ ಅಧಿಕಾರದಿಂದ ಮಾತ್ರ ಜೀವನದಲ್ಲಿ ನೆಮ್ಮದಿ ದೊರೆಯುವುದಿಲ್ಲ. ಮಠಗಳು ಹಾಗೂ ದೇವಾಲಯಗಳಂತಹ ಆಧ್ಯಾತ್ಮಿಕ ತಾಣಗಳಲ್ಲಿ ದೊರೆಯುವ ಆತ್ಮತೃಪತಿ ಮತ್ತು ನೆಮ್ಮದಿ ವಿಶಿಷ್ಟವಾದದ್ದು. ಇಂತಹ ಪವಿತ್ರ ವಾತಾವರಣದಲ್ಲಿ ನಡೆಯುವ ಜಾನಪದ ಕಲಾ ಮೇಳಗಳು ಜನರಿಗೆ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಅನುಭವ ನೀಡುತ್ತವೆ ಎಂದು ಚಲುವರಾಯಸ್ವಾಮಿ ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಠದ ಶ್ರೀಗಳೊಂದಿಗೆ ವಿವಿಧ ಜಾನಪದ ಕಲಾವಿದರನ್ನು ಅಭಿನಂದಿಸಿ ಸನ್ಮಾನಿಸಿದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಾಖಾ ಮಠದ ಶ್ರೀ ಶೇಖರ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಶ್ರೀ ಸೇರಿದಂತೆ ವಿವಿಧ ಸಂಸ್ಥಾನಗಳ ಮಹಾಸ್ವಾಮೀಜಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

