ರಷ್ಯಾ ವಿರುದ್ಧದ ದಾಳಿಯಲ್ಲಿ 800 ಚದರ ಕಿ.ಮೀ. ಪ್ರದೇಶ ಮರು ವಶ: ಝೆಲೆನ್ಸ್ಕಿ

ಕೈವ್: ರಷ್ಯಾ ಪಡೆಗಳ ವಿರುದ್ಧದ ಇತ್ತೀಚಿನ ಕಾರ್ಯಾಚರಣೆಯಲ್ಲಿ ಉಕ್ರೇನ್ 800 ಚದರ ಕಿಲೋಮೀಟರ್‌ಗೂ ಹೆಚ್ಚು ಪ್ರದೇಶವನ್ನು ಮರಳಿ ವಶಪಡಿಸಿಕೊಂಡಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಒಲೆಕ್ಸಾಂಡ್ರಿವ್ಸ್ಕಿ ವಲಯದಲ್ಲಿ ನಡೆದ ದಾಳಿಯಲ್ಲಿ ದೇಶದ ವಾಯುಗಾಮಿ ಆಕ್ರಮಣ ಪಡೆಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂದು ಅವರು ಶ್ಲಾಘಿಸಿದ್ದಾರೆ.

2014ರಲ್ಲಿ ರಷ್ಯಾದ ಆಕ್ರಮಣ ಆರಂಭವಾದ ಬಳಿಕ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಲ್ಲಿ ನಡೆದ ಹಲವು ಪ್ರಮುಖ ಕಾರ್ಯಾಚರಣೆಗಳಲ್ಲಿ ಪ್ಯಾರಾಟ್ರೂಪರ್‌ಗಳು ಭಾಗವಹಿಸಿದ್ದರು. ಸ್ಲೋವ್ಯಾನ್ಸ್ಕ್, ಕ್ರಾಮಾಟರ್ಸ್ಕ್, ಡೆಬಾಲ್ಟ್ಸೆವೆ ಹಾಗೂ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಿಮಾನ ನಿಲ್ದಾಣಗಳಲ್ಲಿನ ಕಾರ್ಯಾಚರಣೆಗಳನ್ನು ಝೆಲೆನ್ಸ್ಕಿ ಸ್ಮರಿಸಿದರು.

ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದ ಬಳಿಕ ಕೈವ್ ಮತ್ತು ಮೈಕೊಲೈವ್ ನಗರಗಳ ರಕ್ಷಣೆಯಲ್ಲೂ, ಡೊನೆಟ್ಸ್ಕ್ ಹಾಗೂ ಖಾರ್ಕಿವ್ ಪ್ರದೇಶಗಳಲ್ಲಿನ ಕಾರ್ಯಾಚರಣೆಗಳಲ್ಲೂ ಪ್ಯಾರಾಟ್ರೂಪರ್‌ಗಳು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಖಾರ್ಕಿವ್ ಪ್ರತಿದಾಳಿ, ಖೇರ್ಸನ್ ಪ್ರದೇಶದ ಕೆಲವು ಭಾಗಗಳ ವಿಮೋಚನೆ ಮತ್ತು 2024ರಲ್ಲಿ ರಷ್ಯಾದ ಕುರ್ಸ್ಕ್ ಪ್ರದೇಶದಲ್ಲಿ ಉಕ್ರೇನ್ ನಡೆಸಿದ ನೆಲದ ಕಾರ್ಯಾಚರಣೆಯಲ್ಲೂ ಈ ಪಡೆಗಳ ಕೊಡುಗೆಯನ್ನು ಅವರು ಉಲ್ಲೇಖಿಸಿದರು.

Related posts