ಶೃಂಗೇರಿಯಲ್ಲಿ ಏಕರೂಪ ಆಚರಣಾ ಸಂಹಿತೆ, ಸಾಮಾನ್ಯ ಸಂಸ್ಕಾರ ಶಿಕ್ಷಣ ಯೋಜನೆಗಳ ಲೋಕಾರ್ಪಣೆ

ಶೃಂಗೇರಿ: ಭಾರತೀಯ ಮೂಲದ ವಿವಿಧ ಧಾರ್ಮಿಕ ಪರಂಪರೆಗಳಲ್ಲಿರುವ ಸಾಮಾನ್ಯ ಮೌಲ್ಯಗಳನ್ನು ಗುರುತಿಸಿ, ಸಮಾನ ಆಚರಣಾ ಸಂಹಿತೆ ಹಾಗೂ ಸಂಸ್ಕಾರ ಶಿಕ್ಷಣವನ್ನು ರೂಪಿಸುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಹೇಳಿದ್ದಾರೆ.

ಶೃಂಗೇರಿಯ ಸಂಸ್ಕೃತ ವಿಶ್ವವಿದ್ಯಾಲಯದ ಶ್ರೀ ಭಾರತಿ ತೀರ್ಥ ಶಾಸ್ತ್ರಸಮುತ್ಕರ್ಷ ಕೇಂದ್ರದಲ್ಲಿ ಭಾರತೀಯ ಸಂತ ಮಹಾ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ್ದ ಏಕರೂಪ ಆಚರಣಾ ಸಂಹಿತೆ (URC) ಮತ್ತು ಏಕರೂಪ ಸಾಮಾನ್ಯ ಸಂಸ್ಕಾರ ಶಿಕ್ಷಣ (UGSE) ಯೋಜನೆಗಳ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದೂ, ಜೈನ, ಬೌದ್ಧ ಮತ್ತು ಸಿಖ್ ಧಾರ್ಮಿಕ ಪರಂಪರೆಗಳಲ್ಲಿರುವ ಸಾಮಾನ್ಯ ಅಂಶಗಳನ್ನು ಆಧರಿಸಿ ನೈತಿಕತೆ, ತತ್ವಜ್ಞಾನ, ಧಾರ್ಮಿಕ ಮೌಲ್ಯಗಳು ಹಾಗೂ ಸಮಷ್ಟಿಯ ಹಿತವನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಈ ಯೋಜನೆಗಳ ಉದ್ದೇಶವಾಗಿದೆ. ಇಂತಹ ಪ್ರಯತ್ನಗಳು ಭಾರತೀಯ ಸಂಸ್ಕೃತಿಯ ಸಂರಕ್ಷಣೆಗೆ ಮಾತ್ರವಲ್ಲದೆ, ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಮಹತ್ವ ಪಡೆಯಲಿವೆ ಎಂದು ಅಭಿಪ್ರಾಯಪಟ್ಟರು.

ಆದಿ ಶಂಕರಾಚಾರ್ಯರು ಧಾರ್ಮಿಕ ಪುನರುತ್ಥಾನಕ್ಕೆ ಶ್ರಮಿಸಿದಂತೆ, ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಧಾರ್ಮಿಕ ಆಚರಣೆ ಮತ್ತು ಸಂಸ್ಕಾರ ಶಿಕ್ಷಣವನ್ನು ರೂಪಿಸಬೇಕಿದೆ. ಸಮಾಜದಲ್ಲಿನ ವೈವಿಧ್ಯತೆಯನ್ನು ವಿಭಜನೆಗೆ ಬಳಸುವ ಬದಲು, ವಿವಿಧ ಪರಂಪರೆಗಳಲ್ಲಿರುವ ಏಕತೆಯ ಅಂಶಗಳನ್ನು ಗುರುತಿಸಿ ಸಾಮರಸ್ಯವನ್ನು ಬಲಪಡಿಸುವುದು ಈ ಯೋಜನೆಗಳ ಆಶಯವಾಗಿದೆ ಎಂದರು.

ಸನಾತನ ಧರ್ಮದ ಮೂಲ ತತ್ವಗಳು ಅಸ್ಪೃಶ್ಯತೆಯನ್ನು ಪ್ರತಿಪಾದಿಸುವುದಿಲ್ಲ ಎಂದು ಹೇಳಿದ ಡಾ. ರವಿ, ಭಾರತೀಯ ಮೂಲದ ವಿವಿಧ ಧಾರ್ಮಿಕ ಪರಂಪರೆಗಳ ಸಮಾನ ಮೌಲ್ಯಗಳನ್ನು ಗುರುತಿಸಿ ಒಗ್ಗೂಡಿಸುವ ಪ್ರಯತ್ನವನ್ನು ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದರು. ವಿವಿಧ ಪರಂಪರೆಗಳ ಮಠಾಧಿಪತಿಗಳು ಮತ್ತು ಧಾರ್ಮಿಕ ಮುಖಂಡರನ್ನು ಒಂದೇ ವೇದಿಕೆಗೆ ತರುವುದು ಮಹತ್ವದ ಕಾರ್ಯವಾಗಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದರು.

ಸಮಾರಂಭದಲ್ಲಿ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು, ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಮಹಾಸ್ವಾಮಿಗಳು, ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು, ಧಾರ್ಮಿಕ ಮುಖಂಡರು, ವಿದ್ವಾಂಸರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Related posts