ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಮಾಜಿ KPSC ಅಧ್ಯಕ್ಷ ಶಿವಶಂಕರಪ್ಪ ವಶಕ್ಕೆ

ಬೆಂಗಳೂರು: ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಾಜಿ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಅವರ ನಿವಾಸದ ಮೇಲೆ ED ಅಧಿಕಾರಿಗಳು ದಾಳಿ ನಡೆಸಿದ್ದು, ಮೊಬೈಲ್ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲನೆಗಾಗಿ ವಶಪಡಿಸಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದದಲ್ಲಿರುವ ಅವರ ನಿವಾಸ ಹಾಗೂ ಕಚೇರಿಯ ಮೇಲೂ ಶೋಧ ನಡೆಸಲಾಗಿದೆ.

ಪಶು ವೈದ್ಯಾಧಿಕಾರಿ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 8 ಜಿಲ್ಲೆಗಳ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆದಿದೆ. KPSC ಸದಸ್ಯೆ ಶಾಂತಾ ಹೊಸಮನಿ ಅವರ ನಿವಾಸ ಹಾಗೂ ಆಯ್ಕೆಯಾದ ಕೆಲವು ಅಭ್ಯರ್ಥಿಗಳ ಮನೆಗಳಲ್ಲೂ ಶೋಧ ನಡೆಸಲಾಗಿದೆ.

ನೇಮಕಾತಿ ಅಕ್ರಮದ ಹಣದ ಜಾಡು ಹಾಗೂ ಡಿಜಿಟಲ್ ಸಾಕ್ಷ್ಯಗಳಿಗಾಗಿ ED ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ತಮ್ಮ ಇಬ್ಬರು ಪುತ್ರಿಯರ ನೇಮಕಾತಿಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಶಿವಶಂಕರಪ್ಪ ಅವರನ್ನು ರಾಜ್ಯಪಾಲರು ಈ ಹಿಂದೆ ಅಮಾನತುಗೊಳಿಸಿದ್ದರು.

Related posts