ಇರಾನ್ ವಿರುದ್ಧ ಯುಎಇ ಸೇನೆಯಿಂದಲೂ ಕಾರ್ಯಾಚರಣೆ? ಮಧ್ಯಪ್ರಾಚ್ಯ ಮತ್ತಷ್ಟು ಉದ್ವಿಗ್ನ

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ಮತ್ತಷ್ಟು ಉಲ್ಬಣಗೊಂಡಿದೆ. ಅಮೆರಿಕವು ಇರಾನ್‌ನ ವಿವಿಧ ಪ್ರದೇಶಗಳ ಮೇಲೆ ದಾಳಿ ಮುಂದುವರಿಸಿದೆ ಎಂಬ ವರದಿಗಳ ನಡುವೆಯೇ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೂಡ ಮೊದಲ ಬಾರಿಗೆ ಇರಾನ್ ವಿರುದ್ಧ ಸೇನಾ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ವರದಿಯಾಗಿದೆ. ಚಬಹಾರ್ ಬಂದರು, ಬುಶೆಹರ್ ಪರಮಾಣು ಸಂಕೀರ್ಣ ಹಾಗೂ ಇರಾನಿಶಾಹರ್ ವಿಮಾನ ನಿಲ್ದಾಣದ ಸಮೀಪ ಪ್ರಬಲ ಸ್ಫೋಟಗಳು ಸಂಭವಿಸಿರುವುದಾಗಿ ತಿಳಿದುಬಂದಿದೆ. ರೈಲ್ವೆ ಸೇತುವೆಗಳು, ಪ್ರಮುಖ ರಸ್ತೆಗಳು ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡ ದಾಳಿಯಿಂದ ವ್ಯಾಪಕ ಹಾನಿ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.

ಇದರ ನಡುವೆಯೇ, ಯುಎಇ ಅಮೆರಿಕ ನಿರ್ಮಿತ ಡ್ರೋನ್‌ಗಳ ಮೂಲಕ ಬಂದರ್ ಅಬ್ಬಾಸ್ ಬಂದರನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ, ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಯುಎಇಗೆ ಸೇರಿದ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ.

ಅಮೆರಿಕದ ನಿರಂತರ ದಾಳಿಗಳ ಬೆನ್ನಲ್ಲೇ ಇರಾನ್ ಹಾರ್ಮುಸ್ ಜಲಸಂಧಿ ಹಾಗೂ ಕೆಂಪು ಸಮುದ್ರ ಭಾಗದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಎಚ್ಚರಿಕೆ ನೀಡಿದೆ. ಕೆಂಪು ಸಮುದ್ರದ ಸಾಗಾಟಕ್ಕೆ ಅಡ್ಡಿಪಡಿಸುವ ಸಾಧ್ಯತೆ ಕುರಿತು ನೀಡಿರುವ ಹೇಳಿಕೆ ಜಾಗತಿಕ ಇಂಧನ ಪೂರೈಕೆ ಮತ್ತು ಅಂತಾರಾಷ್ಟ್ರೀಯ ಸಾಗರ ವಾಣಿಜ್ಯದ ಮೇಲೆ ಹೊಸ ಆತಂಕ ಸೃಷ್ಟಿಸಿದೆ.

Related posts