ನ್ಯೂಯಾರ್ಕ್: ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮವನ್ನು 45 ದಿನಗಳವರೆಗೆ ವಿಸ್ತರಿಸಿರುವ ನಿರ್ಧಾರವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ (Antonio Guterres) ಸ್ವಾಗತಿಸಿದ್ದಾರೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ.
ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಯುದ್ಧ ಅಂತ್ಯಗೊಳಿಸಿ ಗಡಿಭಾಗದ ಜನರ ಸಂಕಷ್ಟ ನಿವಾರಣೆಗೆ ಕೈಗೊಳ್ಳುವ ಎಲ್ಲ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ಗುಟೆರೆಸ್ ತಿಳಿಸಿದ್ದಾರೆ. ಜೊತೆಗೆ, ಎಲ್ಲಾ ಪಕ್ಷಗಳು ಕದನ ವಿರಾಮವನ್ನು ಸಂಪೂರ್ಣವಾಗಿ ಪಾಲಿಸಿ, ದಾಳಿಗಳನ್ನು ನಿಲ್ಲಿಸಿ ಹಾಗೂ ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಗೌರವಿಸಬೇಕು ಎಂದು ಕರೆ ನೀಡಿದ್ದಾರೆ.

ವಾಷಿಂಗ್ಟನ್ನಲ್ಲಿ ನಡೆದ ಮಾತುಕತೆಗಳ ಬಳಿಕ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗೋಟ್ (Tommy Pigott) ಈ ಘೋಷಣೆ ಮಾಡಿದರು. ಇಸ್ರೇಲ್ ಮತ್ತು ಲೆಬನಾನ್ ನಡುವಿನ ಮಾತುಕತೆಗಳು ಫಲಪ್ರದವಾಗಿದ್ದು, ಏಪ್ರಿಲ್ 16ರವರೆಗೆ ಕದನ ವಿರಾಮ ಮುಂದುವರಿಯಲಿದೆ ಎಂದು ತಿಳಿಸಿದರು.
ಇದರೊಂದಿಗೆ, ಜೂನ್ 2 ಮತ್ತು 3ರಂದು ಅಮೆರಿಕದ ವಿದೇಶಾಂಗ ಇಲಾಖೆ ರಾಜಕೀಯ ಮಟ್ಟದ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದೆ. ಇದೇ ವೇಳೆ, ಎರಡೂ ದೇಶಗಳ ಸೇನಾ ಪ್ರತಿನಿಧಿಗಳೊಂದಿಗೆ ಪೆಂಟಗನ್ನಲ್ಲಿ ಭದ್ರತಾ ಮಾತುಕತೆ ಕೂಡ ನಡೆಯಲಿದೆ.
ಇನ್ನೊಂದೆಡೆ, ದಕ್ಷಿಣ ಲೆಬನಾನ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಎರಡು ಶತ್ರು ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಇಸ್ರೇಲಿ ವಾಯುಪಡೆ ಹೇಳಿಕೊಂಡಿದೆ. ಹೆಜ್ಬೊಲ್ಲಾಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.

