ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ; ಇವರೇ ಸಂಭಾವ್ಯ ಸಚಿವರು?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರ ನೂತನ ಸಚಿವರ ಪ್ರಮಾಣವಚನ ಸಮಾರಂಭ ಸಾಧ್ಯತೆಗಳಿದ್ದು, ಸರ್ಕಾರ ಮತ್ತು ಕಾಂಗ್ರೆಸ್ ನಾಯಕತ್ವ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ಸುಮಾರು 20 ಮಂದಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಹೈಕಮಾಂಡ್ ಭಾನುವಾರ ಸಂಜೆ ಅಥವಾ ಸೋಮವಾರ ಬೆಳಿಗ್ಗೆ ಅಂತಿಮ ಪಟ್ಟಿಗೆ ಅನುಮೋದನೆ ನೀಡುವ ನಿರೀಕ್ಷೆಯಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅಂತಿಮ ಪಟ್ಟಿಯೊಂದಿಗೆ ಬೆಂಗಳೂರಿಗೆ ಆಗಮಿಸಲಿದ್ದು, ಅವರೊಂದಿಗೆ ಕೊನೆಯ ಹಂತದ ಸಮಾಲೋಚನೆ ಬಳಿಕ ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

ಲೋಕಭವನದಲ್ಲಿ ಸೋಮವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಸಚಿವ ಸ್ಥಾನಕ್ಕೆ ಸಂಭಾವ್ಯರ ಪಟ್ಟಿಯಲ್ಲಿ ಅಜಯ್ ಧರ್ಮಸಿಂಗ್, ಯಶವಂತರಾಯಗೌಡ ಪಾಟೀಲ, ಟಿ. ರಘುಮೂರ್ತಿ, ಬಿ. ನಾಗೇಂದ್ರ, ಶಿವರಾಜ ತಂಗಡಗಿ, ಸಲೀಂ ಅಹ್ಮದ್, ಎನ್.ಎಸ್. ಬೋಸರಾಜು, ಎನ್. ಚಲುವರಾಯಸ್ವಾಮಿ, ಶಿವಲಿಂಗೇಗೌಡ, ಬಸವರಾಜ ಶಿವಣ್ಣನವರ್, ಲಕ್ಷ್ಮಣ ಸವದಿ, ಸಂತೋಷ್ ಲಾಡ್, ಎಸ್.ಎಸ್. ಮಲ್ಲಿಕಾರ್ಜುನ, ವಿಜಯಾನಂದ ಕಾಶಪ್ಪನವರ್, ಪಿ.ಎಂ. ನರೇಂದ್ರಸ್ವಾಮಿ, ಪುಟ್ಟರಂಗ ಶೆಟ್ಟಿ, ಎ.ಎಸ್. ಪೊನ್ನಣ್ಣ, ಲಕ್ಷ್ಮೀ ಹೆಬ್ಬಾಳ್ಕರ್, ಡಾ. ಆರತಿ ಕೃಷ್ಣ, ಅನ್ನಪೂರ್ಣ ಇ. ತುಕಾರಂ, ಕನೀಜ್ ಫಾತಿಮಾ, ಬಸವಂತಪ್ಪ, ಶರತ್ ಬಚ್ಚೇಗೌಡ, ತನ್ವೀರ್ ಸೇಠ್ ಹಾಗೂ ಆನೇಕಲ್ ಶಿವಣ್ಣ ಅವರ ಹೆಸರುಗಳು ಕೇಳಿಬರುತ್ತಿವೆ.

ಆದಾಗ್ಯೂ, ಸಚಿವ ಸಂಪುಟಕ್ಕೆ ಯಾರು ಸೇರ್ಪಡೆಯಾಗಲಿದ್ದಾರೆ ಎಂಬುದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ ಚರ್ಚೆಯಲ್ಲಿರುವ ಎಲ್ಲ ಹೆಸರುಗಳು ಸದ್ಯ ಊಹಾಪೋಹಗಳ ಪಟ್ಟಿಯಲ್ಲೇ ಉಳಿದಿದ್ದು, ಅಂತಿಮ ನಿರ್ಧಾರಕ್ಕಾಗಿ ರಾಜಕೀಯ ವಲಯ ಕಾತರದಿಂದ ಕಾಯುತ್ತಿದೆ. ಈ ಮಧ್ಯೆ ಸಚಿವ ಸ್ಥಾನಾಕಾಂಕ್ಷಿಗಳು ಕೊನೆಯ ಕ್ಷಣದವರೆಗೂ ತಮ್ಮ ಲಾಬಿಯನ್ನು ತೀವ್ರಗೊಳಿಸಿದ್ದಾರೆ.

Related posts