ಮನೆಗಾಗಿ ಪೂಜಿಸಿದ್ದು ದೇವರನ್ನು, ವರ ನೀಡಿದ್ದು ಪೂಜಾರಿ; ಬಡಪಾಯಿಗೆ ಮನೆ ನಿರ್ಮಿಸಿಕೊಟ್ಟ ಉದ್ಯಮಿ

ಉಡುಪಿ: ಬದುಕಿನಲ್ಲಿದ್ದಾಗ ಮದುವೆ ಮಾಡಿಕೊಳ್ಳಬೇಕು, ಮನೆ ಕಟ್ಟಿಕೊಳ್ಳಬೇಕು ಎಂಬುದು ನಾಣ್ಣುಡಿ. ಆದರೆ ಬಹಳಷ್ಟು ಮಂದಿಯ ಪಾಲಿಗೆ ಈ ಹೆಗ್ಗುರಿ ಕನಸಾಗಿಯೇ ಉಳಿಯುತ್ತದೆ. ಈ ಕನಸು ನನಸಾಗಲು ಅವೆಷ್ಟೋ ಬಡಪಾಯಿಗಳು ನಿತ್ಯ ದೇವರ ಜಪ, ಪೂಜೆ ಮಾಡ್ತಾರೆ. ಅಂತಹಾ ಅಸಹಾಯಕ ಕುಟುಂಬವೊಂದು ದೇವರ ಪ್ರಾರ್ಥನೆಯಲ್ಲಿದ್ದಾಗ ದೇವರಂತೆ ಮುಂದೆ ಬಂದು ನಿಂತವರು ಜನಾನುರಾಗಿ ಉದ್ಯಮಿ.

ಹೌದು, ಊರಿಗೆಲ್ಲಾ ಊಟೋಪಚಾರ ನೀಡುವ ಕಾಯಕದಲ್ಲಿ ತೊಡಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಉಡುಪಿ ಜಿಲ್ಲೆ ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಬಡ ಕುಟುಂಬವೊಂದಕ್ಕೆ ಸುಂದರವಾದ ಮನೆ ನಿರ್ಮಿಸಿ ಕೊಟ್ಟು ಮಾದರಿಯಾಗಿದ್ದಾರೆ.

ಬೈಂದೂರಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನ ಮುಖ್ಯಸ್ಥರೂ ಆಗಿರುವ ಗೋವಿಂದ ಬಾಬು ಪೂಜಾರಿ ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಪರ್ಯಟನೆ ನಿರತರಾಗಿರುವವರು. ಮಾರ್ಚ್-ಏಪ್ರಿಲ್ ವೇಳೆ ಕೊರೋನಾ ಸಂದರ್ಭದಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ್ದ ಅವರು ಲಾಕ್’ಡೌನ್ ಜಾರಿಯಾದ ಕಾರಣ ಅಲ್ಲೇ ಕೆಲ ಸಮಯ ಉಳಿದುಬಿಟ್ಟರು. ಆ ಸಂದರ್ಭದಲ್ಲಿ ತಮ್ಮ ಬಾಲ್ಯದ ಗೆಳೆಯರ ಜೊತೆ ತಮ್ಮೂರಿನ ಜನರ ಸಂಕಷ್ಟಗಳಿಗೆ ನೆರವಾಗುತ್ತಿದ್ದರು. ಯುವಕರ ಸೈನ್ಯ ಕಟ್ಟಿ, ಹಲವಾರು ಹಳ್ಳಿಗಳ ಸಾವಿರಾರು ಕುಟುಂಬಗಳಿಗೆ ಲಾಕ್’ಡೌನ್ ವೇಳೆ ಆಹಾರ ಕಿಟ್ ವಿತರಿಸುತ್ತಿದ್ದಾಗ ಬಡಪಾಯಿ ಕುಟುಂಬವೊಂದರ ವೇದನೆ ಕೇಳಿ ಗೋವಿಂದ ಬಾಬು ಪೂಜಾರಿಯವರು ಮಮ್ಮಲ ಮರುಗಿದರು.

ಏನಿದು ಆಸರೆಯ ಕಥೆ?

ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಂಹಿತ್ಲು ನಿವಾಸಿ ಬೇಬಿ ಸುಬ್ಬಯ್ಯ ದೇವಾಡಿಗ ಕುಟುಂಬ ಸೂರಿಲ್ಲದೆ ಪರದಾಡುತ್ತಿತ್ತು. ವಯಸ್ಸಾದ ಜೋಡಿ ಮತ್ತು ಅವರಿಗೆ ಅಸಹಾಯಹ ಹೆಣ್ಣು ಮಗಳು. ಇಂತಹಾ ಅತಂತ್ರ ಪರಿವಾರಕ್ಕೆ ತಾನೇ ಮನೆ ಕಟ್ಟಿ ಕೊಡುವೆ ಎಂಬ ಸಂಕಲ್ಪ ಮಾಡಿದ ಗೋವಿಂದ ಬಾಬು ಪೂಜಾರಿಯವರು ತನ್ನ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.

ತಮ್ಮ ಮುಂದಾಳುತ್ವದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಂದಲೇ ಸಂಪೂರ್ಣ ಖರ್ಚು ಭರಿಸಿ, ಸುಂದರ ಮನೆಯೊಂದನ್ನು ಕಟ್ಟಿಸಿ ಸಮರ್ಪಿಸಿದ ಗೋವಿಂದ ಬಾಬು ಪೂಜಾರಿಯವರು ಸದ್ದಿಲ್ಲದೇ ಸುದ್ದಿಯಾಗಿದ್ದಾರೆ. ಸಮಾಜಸೇವಕರೆಂದು ಘೋಷಿಸಿಕೊಂಡು ಆಗಾಗ ಸುದ್ದಿಯ ಮುನ್ನಲೆಯಲ್ಲಿರುತ್ತಿರುವವರನ್ನು ನಾಚಿಸುವಂತಿತ್ತು ಇವರ ಈ ಆಸರೆಯ ಕಥೆ.

ಬೇಬಿ ದೇವಾಡಿಗ ಅವರ ಕುಟುಂಬ ಸುಮಾರು 30 ವರ್ಷಗಳಿಂದ ಚಿಕ್ಕ ಗುಡಿಸಿಲಿನಲ್ಲಿ ವಾಸಿಸುತ್ತಿತ್ತು. 2020ರ ಜುಲೈ 6ರಂದು ರಘುನಾಥ ಜೊಯಿಷಿ ಅವರ ಮಾರ್ಗದರ್ಶನದಲ್ಲಿ ಪೂಜೆ ನೆರವೇರಿಸಿ, ಈ ನೂತನ ಮನೆಯನ್ನು ತಮ್ಮ ತಂದೆ-ತಾಯಿ ಬಾಬು- ಮಂಜಮ್ಮಉಪಸ್ಥಿತಿಯಲ್ಲಿ ಗೋವಿಂದ ಬಾಬು ಪೂಜಾರಿ ಹಾಗೂ ಪತ್ನಿ ಮಾಲತಿ ಸಮರ್ಪಿಸಿದಾಗ ಈ ಬಡಪಾಯಿಗಳ ಮುಖದಲ್ಲಿ ಎಂದಿಲ್ಲದ ಆನಂದ ವ್ಯಕ್ತವಾಗಿತ್ತು. ಈ ಮನೆಯ ಗೃಹ ಪ್ರವೇಶದ ಖರ್ಚನ್ನೂ ತಾವೇ ಭಾರಿಸಿದ ಗೋವಿಂದ ಬಾಬು ಪೂಜಾರಿ ಅವರು, ಇದೇ ಸಮಾರಂಭದಲ್ಲಿ ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿಗಳನ್ನೂ, ಊರ ಹಿರಿಯರನ್ನೂ ಹಾಗೂ ಜನಪ್ರತಿನಿಧಿಗಳನ್ನೂ ಆಹ್ವಾನಿಸಿ ಸನ್ಮಾನಿಸಿದರು.

ಬಡವರಿಗಾಗಿ ಸುಸಜ್ಜಿತ ಶಾಲೆ ಕಟ್ಟುವ ಹೆಗ್ಗುರಿ..!!

ತಮ್ಮ ಟ್ರಸ್ಟ್ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡ ಉದ್ಯಮಿ ಗೋವಿಂದ ಬಾಬು ಪೂಜಾರಿ, ತಾವು ಬಡತನದಿಂದಲೇ ಬೆಳೆದವನು. ಹಾಗಾಗಿ ಬಡವರ ಕಷ್ಟ ತಿಳಿದಿದೆ. ಅಂಥವರಿಗೆ ನೆರವಾಗುವುದರಲ್ಲಿ ಖುಷಿಯಿದೆ ಎಂದಿದ್ದಾರೆ. ಶಿಕ್ಷಣ, ಧಾರ್ಮಿಕ, ಆರೋಗ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ನೆರವಾಗುವ ನಿಟ್ಟಿನಲ್ಲಿ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದು, ಇದರ ಜೊತೆಗೆ ತಾವು ಸುಮಾರು ಆರೂವರೆ ಸಾವಿರ ಮಂದಿಗೆ ಉದ್ಯೋಗ ಕೊಡಿಸಿರುವುದಾಗಿಯೂ ಹೆಮ್ಮೆಯಿಂದ ಹೇಳಿದ್ದಾರೆ. ಬಡವರಿಗಾಗಿ ಸುಸಜ್ಜಿತ ಶಾಲೆಯೊಂದನ್ನು ನಿರ್ಮಿಸುವ ಗುರಿಯನ್ನು ತಾವು ಹೊಂದಿರುವುದಾಗಿ ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.

ಇದನ್ನೂ ಓದಿ.. ಹಳ್ಳಿಗೆ ಜೀವಜಲ ಹರಿಸಿದ ‘ಭಗೀರಥ’; ಎಲ್ಲೆಲ್ಲೂ ChefTalk ‘ಪೂಜಾರಿ’ದ್ದೇ ಮಾತು

ಪೌರಕಾರ್ಮಿಕರಲ್ಲಿ ಭಗವಂತನನ್ನು ಕಂಡ ‘ಪೂಜಾರಿ’; ಬೆಂಗಳೂರಿನಲ್ಲೊಂದು ಅನನ್ಯ ಕಾರ್ಯಕ್ರಮ 

Related posts