ರಾಜ್ಯದ ಐಪಿಎಸ್ ಅಧಿಕಾರಿಯ ಮೊಬೈಲ್ ನಂಬರ್ ಉತ್ತರ ಭಾರತದ ಮಂದಿಗೆ ಹೆಲ್ಪ್’ಲೈನ್..!!

ಲಾಕ್ ಡೌನ್ ಪರಿಸ್ಥಿತಿಯಲ್ಲಿ ಅತಂತ್ರವಾಗಿರುವ ಉತ್ತರಭಾರತದ ಮಂದಿಗೆ ಆಸರೆಯಾದವರು ರಾಜ್ಯದ ಖಡಕ್ ಪೊಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್. ಮಾಧ್ಯಮ ಮಾಡಿದ ಯಡವಟ್ಟಿನಿಂದಾಗಿ ಕಿರಿಕಿರಿ ಪರಿಸ್ಥಿತಿ ಎದುರಾದರೂ ಮಾನವೀಯತೆ ಮೆರೆದ ಈ ಐಪಿಎಸ್ ಅಧಿಕಾರಿಗೆ ಇಡೀ ದೇಶವೇ ಸಲಾಂ ಎನ್ನುತ್ತಿದೆ.

ಬೆಂಗಳೂರು: ಕೊರೋನಾ ಮಹಾಮಾರಿ ವೈರಸ್ ದೇಶಾದ್ಯಂತ ಆತಂಕದ ಅಲೆಯನ್ನೇ ಎಬ್ಬಿಸಿದೆ. ಈ ವೈರಾಣು ಹಾವಳಿಯನ್ನು ನಿಯಂತ್ರಿಸುವ ಸಂಬಂಧ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಕೋಟ್ಯಂತರ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ. ಬಿಹಾರ, ಜಾರ್ಖಂಡ್ ಸಹಿತ ಉತ್ತರಭಾರತದ ಅವೆಷ್ಟೋ ಜನ ಸಂದಿಗ್ಧ ಸ್ಥಿತಿಯಲ್ಲಿದ್ದು ಅವರಿಗೆ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯ ಮೊಬೈಲ್ ನಂಬರ್ ಉಚಿತ ಸಹಾಯವಾಣಿಯಂತಾಗಿದೆ. ಇದು ಅಚ್ಚರಿಯೆನಿಸಿದರೂ ಸತ್ಯ.

ಕರ್ನಾಟಕದ ಈ ಐಪಿಎಸ್ ಅಧಿಕಾರಿ ಬೇರಾರೂ ಅಲ್ಲ ರಾಜ್ಯ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ  ಐಜಿಪಿ ಸೀಮಂತ್ ಕುಮಾರ್ ಸಿಂಗ್. ರಾಜ್ಯದ ಪೊಲೀಸ್ ಹಿಸ್ಟರಿಯಲ್ಲಿ ‘ಫೀನಿಕ್ಸ್’ ಎಂದೇ ಗುರುತಾಗಿರುವ ಸೀಮಂತ್ ಕುಮಾರ್ ಸಿಂಗ್, ಹಲವು ದಶಕಗಳಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದು, ಪ್ರಸ್ತುತ ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳ ಜನರ ಸೇವೆಯನ್ನೂ ಮಾಡುತ್ತಿದ್ದಾರೆ. ಯಾರಿಗೋ ಸಹಾಯ ಮಾಡಿದ ಕಾರಣಕ್ಕಾಗಿ ಇದೀಗ ಅವರ ಮೊಬೈಲ್ ನಂಬರ್ ಉತ್ತರ ಭಾರತದ ಜನರ ನಡುವೆ ಸಹಾಯವಾಣಿ ಸಂಖ್ಯೆಯಾಗಿ ಗುರುತಾಗಿದೆ.

ಮಾಧ್ಯಮದ ಯಡವಟ್ಟು; ಬಡಪಾಯಿಗಳಿಗೆ ಪ್ಯಾಕೆಟ್ಟು

ಹೌದು, ಕೆಲದಿನಗಳ ಹಿಂದೆ ಲಾಕ್’ಡೌನ್ ಘೋಷಣೆಯಾದಾಗ ಬಿಹಾರ ಮೂಲದ ಸುಮಾರು 400 ಮಂದಿ ಕರ್ನಾಟಕದಲ್ಲಿ ಸಂಕಷ್ಟದಲ್ಲಿದ್ದು ಅವರಿಗೆ ಊಟದ ವ್ಯವಸ್ಥೆ ಮಾಡುವಂತೆ ಬಿಹಾರದಲ್ಲಿರುವ ಐಪಿಎಸ್ ಅಧಿಕಾರಿಯೊಬ್ಬರು ಸೀಮಂತ್ ಕುಮಾರ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಸೀಮಂತ್ ಕುಮಾರ್, ತನ್ನ ಸಹೋದ್ಯೋಗಿ ಸ್ನೇಹಿತ, ಸಿಐಡಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ದಯಾನಂದ್ ಜೊತೆ ಸೇರಿಕೊಂಡು ಸುಮಾರು 400 ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಇದಕ್ಕೆ ಪೊಲೀಸ್ ಇಲಾಖೆಯ ಇತರ ಸಿಬ್ಬಂದಿ ಕೂಡಾ ಸಹಕರಿಸಿದ್ದರು.

ಈ ಬಗ್ಗೆ ರಾಷ್ಟ್ರೀಯ ಪತ್ರಿಕೆಗಳು ಅಭಿನಂದನಾರ್ಹ ಲೇಖನ ಬರೆದವು. ಈ ಪೈಕಿ ಹಿಂದಿ ಮಾಧ್ಯಮವೊಂದು ದಯಾನಂದ್ ಹಾಗೂ ಸೀಮಂತ್ ಕುಮಾರ್ ಅವರ ಸೇವೆಯನ್ನು ಹೊಗಳಿದ್ದಲ್ಲದೆ, ಸೀಮಂತ್ ಕುಮಾರ್ ಅವರ ಮೊಬೈಲ್ ನಂಬರನ್ನೂ ಸುದ್ದಿಯ ಜೊತೆ ಉಲ್ಲೇಖಿಸಿತ್ತು. ಈ ಸುದ್ದಿಯಲ್ಲಿದ್ದ ನಂಬರನ್ನು ‘ಸಹಾಯವಾಣಿ ನಂಬರ್’ ಎಂದು ತಪ್ಪಾಗಿ ತಿಳಿದ ಜನ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಬಿಹಾರ, ಜಾರ್ಖಂಡ್ ಸಹಿತ ವಿವಿಧ ರಾಜ್ಯಗಳಲ್ಲಿ ಇದು ಶೇರ್ ಆಗಿ  ಇದೀಗ ನಿತ್ಯ ನೂರಾರು ಕರೆಗಳು ಸೀಮಂತ್ ಕುಮಾರ್ ಅವರಿಗೆ ಬರುತ್ತಿವೆ. ರಾತ್ರಿ ಹಗಲೆನ್ನದೆ ಬರುತ್ತಿರುವ ಕರೆಗಳಿಗೆ ಅತೀ ವಿನಯದಿಂದಲೇ ಪ್ರತಿಕ್ರಿಯಿಸುತ್ತಿರುವ ಈ ಐಪಿಎಸ್ ಅಧಿಕಾರಿ, ಕರೆ ಮಾಡಿ ಕೇಳಿದವರಿಗೆಲ್ಲಾ ಊಟ ತಿಂಡಿ ತಲುಪಿಸುತ್ತಿದ್ದಾರೆ.

ಫೀನಿಕ್ಸ್ ಎಂದೇ ಪ್ರತೀತಿ

ಈ ರೀತಿಯ ತಕ್ಷಣದ ಸೇವೆ ಇದೆ ಮೊದಲಲ್ಲ. ಸೀಮಂತ್ ಕುಮಾರ್ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಆರಂಭಿಸಿದ ಆರಂಭದಲ್ಲಿ ದಕ್ಷಿಣಕನ್ನಡ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಗುಂಪು ಘರ್ಷಣೆಗಳಾದಾಗ ಸ್ಥಳದಲ್ಲೇ ಮೊಕ್ಕಾಮ್ ಹೂಡಿ ಜನರ ಕಷ್ಟಗಳಿಗೆ ಸ್ಪಂಧಿಸುತ್ತಿದ್ದರು. ಫರಂಗಿಪೇಟೆ ಎಂಬಲ್ಲಿ ಅಹಿತಕರ ಘಟನೆ ನಡೆದಾಗ ಬಸ್ ಸ್ಟಾಂಡನ್ನೇ ಮನೆಯಾಗಿಸಿಕೊಂಡು ಹಗಲು ರಾತ್ರಿ ಅಲ್ಲೇ ಉಳಿದು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಇಂತಹಾ ಸ್ಥಿತಿಯಲ್ಲೂ ತಕ್ಷಣ ಎದ್ದು ಬಂದು ಕಾರ್ಯೋನ್ಮುಖರಾಗುತ್ತಿದ್ದ ಸೀಮಂತ್ ಕುಮಾರ್ ಅವರನ್ನು ಆಗಿನ ಕಾನೂನು ಸುವ್ಯವಸ್ಥೆ ಎಡಿಜಿಪಿಯಾಗಿದ್ದ ಸುಭಾಷ್ ಭರಣಿಯವರು ‘ಫೀನಿಕ್ಸ್’ ಪಕ್ಷಿಗೆ ಹೋಲಿಸಿ ಹೇಳಿಕೆ ಕೊಟ್ಟಿದ್ದರು. ಅನಂತರ ಅವರನ್ನು ಬಹುತೇಕ ಮಾಧ್ಯಮಗಳು ಫೀನಿಕ್ಸ್ ಎಂದೇ ಉಲ್ಲೇಖಿಸುತ್ತಿವೆ.

ಈಗಿನ ಲಾಕ್ ಡೌನ್ ಪರಿಸ್ಥಿತಿಯಲ್ಲೂ ಅವರು ಬಿಹಾರ, ಜಾರ್ಖಂಡ್, ಕೇರಳ ಮೂಲದ ಸುಮಾರು 300-400 ಮಂದಿಗೆ ನಿತ್ಯ ಊಟ ಉಪಚಾರ ರ ವ್ಯವಸ್ಥೆ ಮಾಡಿ ಇಡೀ ದೇಶದ ಗಮನಸೆಳೆದಿದ್ದಾರೆ. ಈ ಪೊಲೀಸ್ ಅಧಿಕಾರಿಗಳ ಸೇವೆ ಬಗ್ಗೆ ಕೃತಜ್ಞತೆ ಸಲ್ಲಿಸಿರುವ ಬಿಹಾರ ಮುಖ್ಯಮಂತ್ರಿಯವರು, ಈ ವಿಚಾರದಲ್ಲಿ ಕರ್ನಾಟಕ ಸಿಎಂ ಯಡಿಯೂರಪ್ಪ ಅವರನ್ನೂ ಅಭಿನಂದಿಸಿದ್ದಾರೆ.

Related posts