ಆನೇಕಲ್ ಪಟಾಕಿ ದುರಂತ ಬಗ್ಗೆ ಉನ್ನತಮಟ್ಟದ ತನಿಖೆಗೆ ಹೆಚ್ಡಿಕೆ ಆಗ್ರಹ

ಬೆಂಗಳೂರು: ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಕಿ ಸಂಗ್ರಹಗಾರದಲ್ಲಿ ಸಂಭವಿಸಿರುವ ಅಗ್ನಿ ದುರಂತದಲ್ಲಿ 14 ಜನ ಕಾರ್ಮಿಕರು ದುರಂತ ಸಾವು ಕಂಡಿರುವ ಘಟನೆಯ ಬಗ್ಗೆ ತಿ ದಿಗ್ಭ್ರಮೆ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ದುರಂತದ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದೀಪಾವಳಿಗೆ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಈ ಮುಗ್ಧ ಜೀವಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಬಲಿಯಾಗಿರುವ ಘಟನೆ ಮನ ಕಲಕುವಂತಿದೆ ಎಂದಿರುವ ಅವರು, ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸಂಭವಿಸಿರುವ ಈ ಘಟನೆ ಅನೇಕ ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ. ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ ಇದ್ದಿದ್ದೇ ದುರಂತಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.

ಈ ದುರ್ಘಟನೆ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಟ್ವೀಟ್ ಮಾಡಿ ಆಗ್ರಹಿಸಿರುವ ಹೆಚ್ಡಿಕೆ, ಬದುಕು ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರಕಾರ ಆಸರೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

Related posts