ರಾಮನಗರ: ಪ್ರಾಧಿಕಾರ ನೀರು ಬಿಡಿ ಎಂದು ಸೂಚನೆ ನೀಡಿದಾಕ್ಷಣ ರಾಜ್ಯ ಸರಕಾರವು ತಡಮಾಡದೆ ಸುಪ್ರೀಂ ಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಬೇಕಿತ್ತು. ಅದು ಬಿಟ್ಟು ತಮಿಳುನಾಡಿಗೆ ನೀರು ಬಿಡುವ ಆತುರ ತೂರಿದ್ದೇಕೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಒಕ್ಕೂಟ ವ್ಯವಸ್ಥೆಯ ಬಗ್ಗೆಯೇ ಕನ್ನಡಿಗರಿಗೆ ಭ್ರಮನಿರಸನ ಆಗುತ್ತಿದೆ ಎಂದು ನಾವು ಅತ್ಯಂತ ಆಕ್ರೋಶದಿಂದಲೇ ಹೇಳಲೇಬೇಕು. ತಮಿಳುನಾಡು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾನೆ.
ಬಿಡದಿಯ ತಮ್ಮ ತೋಟದ ಮನೆಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಲ್ಲಿ ನಾವು ಅಣೆಕಟ್ಟು ಕಟ್ಟಿದ್ದೇವೆ. ನಮ್ಮ ಜನರ ಹಣದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದ್ದೇವೆ. ಕೇಂದ್ರ ಸರಕಾರವೇನೂ ನಮಗೇನೂ ಇದಕ್ಕೆ ಹಣ ಕೊಟ್ಟಿಲ್ಲ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅಣೆಕಟ್ಟು ಇರುವುದು ನಮ್ಮಲ್ಲಿ, ಅದನ್ನು ಕಟ್ಟಿದ್ದು ನಾವು. 200 ವರ್ಷಗಳಿಂದ ಅವರ ದಬ್ಬಾಳಿಕೆ ಸಹಿಸಿಕೊಂದಿದ್ದೇವೆ. ಇದನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆಯಬೇಕಾ? ಎಂದು ಕಿಡಿಕಾರಿದರು
ಅಂತಿಮವಾಗಿ ನಾವು ಕೂಡ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಎಷ್ಟು ವರ್ಷ ಈ ದಬ್ಬಾಳಿಕೆ ಸಹಿಸಲು ಸಾಧ್ಯ? ಆದೇಶ ಧಿಕ್ಕರಿಸಿದರೆ ಜೈಲಿಗೆ ಹಾಕ್ತಾರಾ? ಹಾಕಲಿ ಬಿಡಿ.. ಅರೆಸೇನಾ ಪಡೆಯನ್ನು ಕರೆಸುತ್ತಾರ? ಕರೆಸಲಿ ನೋಡೋಣ. ಹೀಗೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದರೆ ಸಹಿಸಲು ಸಾಧ್ಯವೇ? ಇದು ಯಾವ ಸೀಮೆ ಒಕ್ಕೂಟದ ವ್ಯವಸ್ಥೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಗ್ಗೂಡಿ ಹೋರಾಟ ಮಾಡಲೇಬೇಕಿದೆ. ತಮಿಳುನಾಡಿನಲ್ಲಿ ಯಾವ ರೀತಿ ಎಲ್ಲರೂ ಇಂಥ ಸಂದರ್ಭಗಳಲ್ಲಿ ಒಗ್ಗೂಡುತ್ತಾರೆ? ಹಾಗೆಯೇ ನಾವೂ ಒಗ್ಗೂಡಬೇಕು. ಆದರೆ, ರಾಜಕೀಯ ಅಂತ ನಾವಿಲ್ಲಿ ಹೊಡೆದಾಡಿಕೊಂಡು ಕೂತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಾನು ದೆಹಲಿಗೆ ಹೋದಾಗ ಈ ಬಗ್ಗೆ ಮಾತನಾಡುತ್ತೇನೆ. ಮೈತ್ರಿ ಮಾಡಿಕೊಳ್ತಾ ಇದೀವಿ ಅನ್ನುವ ಕಾರಣಕ್ಕೆ ಇದರ ಬಗ್ಗೆ ಮಾತಾಡಲು ಹಿಂದೆಮುಂದೆ ನೋಡುವುದಿಲ್ಲ. ಮೈತ್ರಿ ಬಗ್ಗೆ ಮಾತಾಡುವ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಕೂಡ ಚರ್ಚೆ ನಡೆಸುತ್ತೇನೆ. ರಾಜ್ಯದ ಹಿತವನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ. ಹಾಗೆಯೇ, ಬಿಜೆಪಿಯವರು ಧೈರ್ಯದಿಂದ ಮೋದಿ ಅವರ ಬಳಿ ಹೋಗಿ ಮಾತಾಡಲಿ. ನಾನೂ ಪ್ರಾಮಾಣಿಕವಾಗಿ ಸಲಹೆ ಕೊಡುತ್ತೇನೆ ಎಂದರು.
ಅಗಸ್ಟ್ 10ರಂದು ಕಾವೇರಿ ಜಲ ನಿಯಂತ್ರಣ ಸಭೆ, ಅಗಸ್ಟ್ 11ರಂದು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಅತ್ತ ನೀರು ಬಿಡಲು ಕರ್ನಾಟಕಕ್ಕೆ ಪ್ರಾಧಿಕಾರ ಸೂಚನೆ ನೀಡಿದ ಮರುದಿನವೇ ತಮಿಳುನಾಡು ರಾಜ್ಯವು ತುರ್ತಾಗಿ ಸುಪ್ರೀಂ ಕೋರ್ಟಿಗೆ ಹೋಗಬೇಕಿತ್ತು. ಹಾಗೆ ಮಾಡಲಿಲ್ಲ, ರಾಜ್ಯ ಸರಕಾರ ವಿನಾಕಾರಣ ಕಾಲಹರಣ ಮಾಡಿತು ಎಂದು ಅವರು ನೇರ ಆರೋಪ ಮಾಡಿದರು.
ಸೋಮವಾರದಂದು ಮುಂದಿನ 15 ದಿನ ನೆರೆರಾಜ್ಯಕ್ಕೆ ನಿತ್ಯವೂ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಹೇಳಿದ ಕೂಡಲೇ ರಾಜ್ಯ ಸರಕಾರ ಒಂದು ತುರ್ತು ಅರ್ಜಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಬೇಕಿತ್ತು. ಮಧ್ಯರಾತ್ರಿ ಆದರೂ ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಿತ್ತು. ಎಷ್ಟೋ ಸಂದರ್ಭದಲ್ಲಿ ಮಧ್ಯರಾತ್ರಿ ಸಮಯದಲ್ಲಿಯೂ ಸುಪ್ರೀಂ ಕೋರ್ಟ್ ಕಲಾಪ ನಡೆದಿದೆ. ರಾಜ್ಯ ಸರಕಾರ ಈ ವಿಷಯದಲ್ಲಿ ಪೂರ್ಣ ವಿಫಲವಾಗಿದೆ. ಸರಕಾರಕ್ಕೆ ಕಾನೂನು ತಜ್ಞರು ಸಲಹೆ ಕೊಡಲಿಲ್ಲವಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಗೌರಿ ಗಣೇಶ ಹಬ್ಬವನ್ನು ಜನರು ಆಚರಣೆ ಮಾಡುತ್ತಿದ್ದರೆ, ಇನ್ನೊಂದು ಕಡೆ ರಾಜ್ಯ ಸರಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ನೆರೆರಾಜ್ಯದ ಒತ್ತಡಕ್ಕೆ ಮಣಿದು ಮುಂದಿನ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ ಮಾಡಿದೆ. ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ರಾಜ್ಯ ಸರಕಾರ ಪಟ್ಟು ಹಿಡಿಯಬೇಕಿತ್ತು ಎಂದರು.
ತಮಿಳುನಾಡು ಸುಪ್ರೀಂ ಕೋರ್ಟ್ ಮುಂದೆ ಹೋಗಿರುವುದರಿಂದ ಕೋರ್ಟ್ ಆದೇಶ ಬರುವವರೆಗೂ ಕಾಯಬೇಕಿತ್ತು. ಈಗ ನೀರು ಬಿಡಲು ತರಾತುರಿ ಏನಿದೆ? ಯಾಕೆ ಮೊದಲೇ ನೀರು ಬಿಡಬೇಕಿತ್ತು? ನಾನು ಸಿಎಂ ಆಗಿದ್ದಾಗ ಇಂಥ. ಆದೇಶ ಬಂದಾಗ ರಿವ್ಯೂ ಪಿಟಿಷನ್ ಹಾಕಿದ್ಧೆವು. ಅಂಥ ಅರ್ಜಿ ಸಲ್ಲಿಸುವುದಕ್ಕೆ ಇವರಿಗೆ ಏನಾಗಿತ್ತು? ಎಂದು ಖಾರವಾಗಿ ಹೇಳಿದರು.
ನಾವು ನೀರನ್ನು ಬಿಡದೇ ಇದ್ದರೆ, ಕೋರ್ಟ್ ನಲ್ಲಿ ನಮ್ಮ ವಿರುದ್ದ ಆದೇಶ ಬರಬಹುದು ಎಂದು ನಿನ್ನೆ ರಾತ್ರಿ ಯಿಂದಲೇ ತಮಿಳುನಾಡಿಗೆ ನೀರನ್ನು ಸರಕಾರ ಹರಿಸುತ್ತಿದೆ. ಪ್ರಾಧಿಕಾರದ ಸೂಚನೆ ಬಂದ ಕೂಡಲೇ ವಿವೇಚನಾಹೀನರಾಗಿ ಜಲ ಸಂಪನ್ಮೂಲ ಸಚಿವರು ತರಾತುರಿಯಲ್ಲಿ ನೀರು ಹರಿಸುವ ನಿರ್ಧಾರ ಮಾಡಿರುವುದು ಸರಿಯಲ್ಲ. ಇಬ್ಬರು ನಮ್ಮ ರೈತರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಅವರು ದೂರಿದರು.
ಹಿಂದಿನ ಸರಕಾರಗಳು ನೀರು ಬಿಟ್ಟಿಲ್ಲವೇ ಎಂದು ಸಚಿವರು ಕೇಳುತ್ತಿದ್ದಾರೆ. ಮಳೆಯ ಅಭಾವದಿಂದ ಕೃಷಿಗೆ ನೀರು ಕೊಡಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಹಾಕಿರುವ ಬೆಳೆಗಳಿಗೆ ಬೆಂಕಿ ಇಡುವ ಸ್ಥಿತಿಗೆ ರೈತರು ಬಂದಿದ್ದಾರೆ. ಇದರ ಜತೆ ಜತೆಗೆ ನಮ್ಮ ರೈತರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಸಭೆಗಳು ನಡೆದಾಗ ನಮ್ಮ ರಾಜ್ಯದ ಹಿರಿಯ ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸದೇ ಲಘುವಾಗಿ ತೆಗೆದುಕೊಂಡಿದ್ದಾರೆ. ಅಲ್ಲಿ ನೋಡಿದರೆ ತಮಿಳುನಾಡಿನ ಹತ್ತು ಹದಿನೈದು ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸುತ್ತಾರೆ. ಪಾಪ.. ನಮ್ಮ ಅಧಿಕಾರಿಗಳಿಗೆ ಬಿಡುವೇ ಇಲ್ಲ. ಪ್ರಾಧಿಕಾರ ಮತ್ತು ಜಲ ನಿಯಂತ್ರಣ ಸಮಿತಿ ಸಭೆಗಳಿಗೆ ವರ್ಚುವಲ್ ಮೂಲಕ ಹಾಜರಾಗುತ್ತಾರೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ರಾಜ್ಯಸಭೆಯಲ್ಲಿ ದೇವೇಗೌಡರು ಮಾತಾಡಿದ್ದು ಎಲ್ಲ ಗಮನಿಸಿದ್ದೀರಿ. ಆಗ ರಾಜ್ಯದವರೇ ಆಗಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಎಲ್ಲಿ ಹೋಗಿದ್ದರು? ದೇವೇಗೌಡರು ಇಂಥಾ ಇಳಿ ವಯಸ್ಸಿನಲ್ಲಿಯೂ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಏನಾಗಿದೆ? ತಮಿಳುನಾಡಿನವರು ಈ ವಿಚಾರ ಪ್ರಸ್ತಾಪ ಮಾಡಿದಾಗ ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಮಾತಾಡಲಿಲ್ಲ ಎಂದು ಕುಮಾರಸ್ವಾಮಿ ಅವರು ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜಲ ಸಂಕಷ್ಟವನ್ನು ಸದನದ ಮುಂದೆ ಇಟ್ಟರು. ಅವರು ಭಾಷಣ ಮಾತನಾಡುತ್ತಿದ್ದರೆ ತಮಿಳುನಾಡಿನ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದರು. ಅವರನ್ನು ಎದುರಿಸಲು ಕೂತು ಮಾತನಾಡುತ್ತಿದ್ದ ದೇವೇಗೌಡರು ಎದ್ದು ನಿಂತರು. ಕೊನೆಪಕ್ಷ ತಮಿಳುನಾಡಿಗೆ ನೀರು ಹರಿಸುವ ಮುನ್ನ ಆ ದೃಶ್ಯವನ್ನಾದರೂ ಕಣ್ಮುಂದೆ ತಂದುಕೊಳ್ಳಬಹುದಿತ್ತಲ್ಲ ಎಂದು ಸರ್ಕಾರದ ವಿರುದ್ಧ ಅವರು ಹರಿಹಾಯ್ದರು.