ತುಮಕೂರು: ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ . ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಅನ್ನಭಾಗ್ಯ, ಯುವ ನಿಧಿ ಹಾಗೂ ಶಕ್ತಿ ಯೋಜನೆಗಳ ಮೂಲಕ ಕೋಟ್ಯಾಂತರ ಕುಟುಂಬಗಳ ಬದುಕಿಗೆ ಆಶಾಕಿರಣವಾಗಿದ್ದೇವೆ. ರೈತರು, ಮಹಿಳೆಯರು, ಯುವಕರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ ಎಂದು ವಿಧಾನ ಪರಿಷತ್ನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಹೇಳಿದ್ದಾರೆ.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ “3 ವರ್ಷಗಳ ಸಾಧನೆಯ ಸೇವೆಯ ಸಮರ್ಪಣೆ” ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು, “ಸರ್ವ ಜನಾಂಗದ ಅಭಿವೃದ್ಧಿಯ ಸರ್ಕಾರ ಕಾಂಗ್ರೆಸ್ ಸರ್ಕಾರ” ಎಂದು ಅವರು ಹೇಳಿದರು.
ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಹಾಗೂ ಉದ್ಯೋಗ ಸೃಷ್ಟಿ ಕ್ಷೇತ್ರಗಳಲ್ಲಿಯೂ ರಾಜ್ಯ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಜನಸಾಮಾನ್ಯರ ಬದುಕಿನ ಮಟ್ಟವನ್ನು ಸುಧಾರಿಸುವ ದಿಕ್ಕಿನಲ್ಲಿ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಲೀಂ ಅಹ್ಮದ್ ತಿಳಿಸಿದರು.
ಬಿಜೆಪಿ ಸುಳ್ಳು ಹೇಳುವ ಸರಕಾರ, ಅಧಿಕಾರಕ್ಕೆ ಬರುವ ಮೊದಲು ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ಜನರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಣಹಾಕುತ್ತೇವೆ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿ ಯಾವುದೇ ಭರವಸೆ ಈಡೇರಿಸಿಲ್ಲ. ಈಗ ಪೆಟ್ರೋಲ್, ಡೀಸೆಲ್ , ಅಡುಗೆ ಅನಿಲ ದರ ಹೆಚ್ಚು ಮಾಡಿದೆ. ಬೆಲೆ ಏರಿಕೆಯಿಂದ ದೇಶದ ಜನರು ನೊಂದಿದ್ದಾರೆ.
ಮಹಾದಾಯಿ, ಮೇಕೆದಾಟು ಯೋಜನೆ ಸಮಸ್ಯೆ ಬಗೆಹರಿಸಿಲ್ಲ, ಬಿಜೆಪಿಯಿಂದ ಗೆದ್ದು ಕೇಂದ್ರದಲ್ಲಿರುವ ರಾಜ್ಯದ ಸಚಿವರು ಯಾವುದೇ ನ್ಯಾಯ ಕೊಡಿಸುವ ಕೆಲಸ ಮಾಡಿಲ್ಲ ಎಂದು ಸಲೀಂ ಅಹ್ಮದ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ರಾಜ್ಯದಲ್ಲಿ 2028ರಲ್ಲಿಯೂ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಮುಂದಿನ ದಿನಗಳಲ್ಲಿಯೂ ಜನಪರ ಆಡಳಿತವನ್ನು ಇನ್ನಷ್ಟು ಬಲಪಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು .

