ಬೆಂಗಳೂರು: ಬೆಂಗಳೂರಿನ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪಾರದರ್ಶಕತೆ ಹೆಚ್ಚಿಸಿ, ವಿಳಂಬ ತಪ್ಪಿಸಿ ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸುವುದು ಇದರ ಉದ್ದೇಶವಾಗಿದೆ.
ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅರ್ಜಿ ಸಲ್ಲಿಕೆ, ಪರಿಶೀಲನೆ, ಪ್ರಮಾಣಪತ್ರ ವಿತರಣೆ, ಖರೀದಿ, ಮಾರಾಟ ಹಾಗೂ ಬಳಕೆ ಸೇರಿದಂತೆ ಟಿಡಿಆರ್ ಪ್ರಕ್ರಿಯೆಯ ಎಲ್ಲ ಹಂತಗಳನ್ನು ಒಂದೇ ಆನ್ಲೈನ್ ವೇದಿಕೆಗೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಹಿವಾಟುಗಳ ಸಂಪೂರ್ಣ ಮಾಹಿತಿ ಆನ್ಲೈನ್ನಲ್ಲಿ ಲಭ್ಯವಾಗಬೇಕು. ಇದರಿಂದ ಕಾಗದಪತ್ರಗಳ ಬಳಕೆ, ಕಚೇರಿಗಳಿಗೆ ಪದೇಪದೇ ಭೇಟಿ ಹಾಗೂ ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಲಿದೆ ಎಂದರು.
ಪಾರದರ್ಶಕ ಟಿಡಿಆರ್ ವ್ಯವಸ್ಥೆಯಿಂದ ರಸ್ತೆ ಅಗಲೀಕರಣ ಮತ್ತು ಹೊಸ ರಸ್ತೆ ನಿರ್ಮಾಣಕ್ಕೆ ಅಗತ್ಯ ಭೂಮಿ ಪಡೆಯುವ ಪ್ರಕ್ರಿಯೆ ವೇಗಗೊಳ್ಳಲಿದ್ದು, ನಗರದ ಸಂಚಾರ ದಟ್ಟಣೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.

