ಮುಂದಿನ 10-11 ವರ್ಷಗಳಲ್ಲಿ 500 ಗಿಗಾವ್ಯಾಟ್ ಶುದ್ಧ ಇಂಧನ ಸಾಮರ್ಥ್ಯ ಸೇರ್ಪಡೆ: ಮೋದಿ

ನವದೆಹಲಿ: ಮುಂದಿನ 10ರಿಂದ 11 ವರ್ಷಗಳಲ್ಲಿ ಭಾರತವು ಹೆಚ್ಚುವರಿಯಾಗಿ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಗುರಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸೋಮವಾರ ಭಾರತ್ ಮಂಟಪದಲ್ಲಿ ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026 ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಇಂಧನ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ಶುದ್ಧ ಇಂಧನ ಅತ್ಯಗತ್ಯ ಎಂದರು.

2025ರಲ್ಲಿ ಭಾರತದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪಳೆಯುಳಿಕೆಯೇತರ ಇಂಧನದ ಪಾಲು ಶೇ.50 ದಾಟಿದ್ದು, ಪ್ಯಾರಿಸ್ ಹವಾಮಾನ ಬದ್ಧತೆಯನ್ನು ಐದು ವರ್ಷ ಮುಂಚಿತವಾಗಿಯೇ ಸಾಧಿಸಲಾಗಿದೆ. ಈಗಾಗಲೇ ಸುಮಾರು 300 ಗಿಗಾವ್ಯಾಟ್ ಸಾಮರ್ಥ್ಯ ಲಭ್ಯವಿದೆ ಎಂದು ತಿಳಿಸಿದರು.

ಪಿಎಂ ಸೂರ್ಯ ಘರ್ ಯೋಜನೆಯಡಿ 65 ಲಕ್ಷಕ್ಕೂ ಹೆಚ್ಚು ಮನೆಗಳು ಮೇಲ್ಛಾವಣಿ ಸೌರ ವಿದ್ಯುತ್ ಅಳವಡಿಸಿಕೊಂಡಿವೆ. ಸೌರಶಕ್ತಿಯಿಂದ ಅಡುಗೆ ಮತ್ತು ವಿದ್ಯುತ್ ವಾಹನಗಳ ಚಾರ್ಜಿಂಗ್‌ಗೆ ಅನುಕೂಲವಾಗುವ ನವೀನ ತಂತ್ರಜ್ಞಾನ ಅಭಿವೃದ್ಧಿಪಡಿಸುವಂತೆ ಸ್ಟಾರ್ಟ್‌ಅಪ್‌ಗಳು ಮತ್ತು ಐಐಟಿಗಳಿಗೆ ಕರೆ ನೀಡಿದರು.

ಕೃಷಿ, ಹೈನುಗಾರಿಕೆ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಸೌರಶಕ್ತಿ ಬಳಕೆ ವಿಸ್ತರಿಸುವುದರ ಜೊತೆಗೆ ವಿದ್ಯುತ್ ಪ್ರಸರಣ ಜಾಲವನ್ನು ಬಲಪಡಿಸುವ ಅಗತ್ಯವಿದೆ ಎಂದು ಮೋದಿ ಪ್ರತಿಪಾದಿಸಿದರು.

Related posts