ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಹೈಂದವ’ದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಲುಧೀರ್ ಬೈರೆಡ್ಡಿ ನಿರ್ದೇಶನದ ಈ ಚಿತ್ರವು 2026ರ ನವೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರಂಗಾಪುರಂ ಗ್ರಾಮದ ಹಿನ್ನೆಲೆಯಲ್ಲಿರುವ ನಿಗೂಢ ಘಟನೆಗಳು ಚಿತ್ರದ ಕಥಾಹಂದರದ ಪ್ರಮುಖ ಭಾಗವಾಗಿವೆ. ಪ್ರಾಚೀನ ದೇವಾಲಯದ ವಿಗ್ರಹಗಳು ನಾಪತ್ತೆಯಾಗುವುದು ಹಾಗೂ ಕೊಲೆ ಪ್ರಕರಣವೊಂದರ ಸುತ್ತ ಕಥೆ ಸಾಗುತ್ತದೆ. ಚಿತ್ರದಲ್ಲಿ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಂಯುಕ್ತಾ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದು, ಹಿರಿಯ ನಟ ಮಹೇಶ್ ಮಂಜ್ರೇಕರ್ ದೇವಾಲಯದ ಅರ್ಚಕರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೌರಭ್ ಸಚ್ದೇವ, ಜೆ.ಡಿ. ಚಕ್ರವರ್ತಿ, ಶಿವಾಜಿ ರಾಜಾ ಮತ್ತು ಗೆಟಪ್ ಶ್ರೀನು ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.
ಮೂನ್ಶೈನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಹೈಂದವ’ ಚಿತ್ರಕ್ಕೆ ಮಹೇಶ್ ಚಂದು ನಿರ್ಮಾಪಕರಾಗಿದ್ದಾರೆ. ಸ್ಯಾಮ್ ಸಿ.ಎಸ್. ಸಂಗೀತ ಸಂಯೋಜನೆ ಮಾಡಿದ್ದು, ಟೀಸರ್ನಲ್ಲಿನ ನಿಗೂಢ ಕಥಾವಸ್ತು ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

