ನವದೆಹಲಿ: ದಕ್ಷಿಣ ಮಧ್ಯ ರೈಲ್ವೆಯ ವಾಡಿ–ರಾಯಚೂರು ವಿಭಾಗದ ವಿದ್ಯುತ್ ಎಳೆತ ವ್ಯವಸ್ಥೆ ಮೇಲ್ದರ್ಜೆಗೇರಿಸಲು ₹220 ಕೋಟಿ ವೆಚ್ಚದ ಯೋಜನೆಗೆ ಭಾರತೀಯ ರೈಲ್ವೆ ಅನುಮೋದನೆ ನೀಡಿದೆ. ಈ ಯೋಜನೆಯು ರೈಲು ಸಂಚಾರ ಸಾಮರ್ಥ್ಯ ಹೆಚ್ಚಿಸುವ ಹಾಗೂ ಕಾರ್ಯಾಚರಣೆಯ ದಕ್ಷತೆ ಸುಧಾರಿಸುವ ಗುರಿ ಹೊಂದಿದೆ.
ಯೋಜನೆಯಡಿ 102 ರೂಟ್ ಕಿಲೋಮೀಟರ್ (204 ಟ್ರ್ಯಾಕ್ ಕಿಲೋಮೀಟರ್) ಡಬಲ್ಲೈನ್ ವಿಭಾಗದಲ್ಲಿರುವ 1×25 ಕಿ.ವೋ. ವಿದ್ಯುತ್ ಎಳೆತ ವ್ಯವಸ್ಥೆಯನ್ನು 2×25 ಕಿ.ವೋ. ವ್ಯವಸ್ಥೆಗೆ ಪರಿವರ್ತಿಸಲಾಗುತ್ತದೆ.

ವಾಡಿ–ರಾಯಚೂರು ಮಾರ್ಗವು ಮುಂಬೈ, ಪುಣೆ, ರಾಯಚೂರು, ಗುಂಟಕಲ್, ಕಡಪ, ರೇಣಿಗುಂಟ ಹಾಗೂ ಚೆನ್ನೈ ಸಂಪರ್ಕಿಸುವ ಹೆಚ್ಚಿನ ಸಾಂದ್ರತೆಯ ರೈಲು ಕಾರಿಡಾರ್ನ ಪ್ರಮುಖ ಭಾಗವಾಗಿದೆ. ಈ ಮಾರ್ಗವು ಪ್ರಯಾಣಿಕ ಹಾಗೂ ಸರಕು ಸಾಗಣೆಗೆ ಅತ್ಯಂತ ಮಹತ್ವದ್ದಾಗಿದೆ.
ರೈಲ್ವೆಯ ಪ್ರಕಾರ, ನವೀಕರಿಸಿದ ವಿದ್ಯುತ್ ವ್ಯವಸ್ಥೆಯಿಂದ ರೈಲುಗಳಿಗೆ ವಿದ್ಯುತ್ ಪೂರೈಕೆ ಮತ್ತಷ್ಟು ಬಲವಾಗಲಿದ್ದು, ಹೆಚ್ಚುತ್ತಿರುವ ಸಂಚಾರವನ್ನು ಸಮರ್ಥವಾಗಿ ನಿರ್ವಹಿಸಲು ನೆರವಾಗಲಿದೆ. ಇದರಿಂದ ಭಾರೀ ಸರಕು ಹಾಗೂ ಪ್ರಯಾಣಿಕ ರೈಲುಗಳ ಸುಗಮ ಸಂಚಾರ, ಕಾರ್ಯಾಚರಣೆಯ ವಿಶ್ವಾಸಾರ್ಹತೆ ಮತ್ತು ಸೇವಾ ಗುಣಮಟ್ಟವೂ ಸುಧಾರಿಸುವ ನಿರೀಕ್ಷೆಯಿದೆ.
ಈ ಯೋಜನೆಯು ಭಾರತೀಯ ರೈಲ್ವೆಯ ಮೂಲಸೌಕರ್ಯ ಆಧುನೀಕರಣ ಹಾಗೂ ಹೆಚ್ಚಿನ ಸಾಂದ್ರತೆಯ ರೈಲು ಮಾರ್ಗಗಳ ಸಾಮರ್ಥ್ಯ ವಿಸ್ತರಣೆಯ ಮಹತ್ವದ ಭಾಗವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

