ಹುಬ್ಬಳ್ಳಿ, ಏ.12: ಹೈದರಾಬಾದ್‌ನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ Fly91 Airlines ವಿಮಾನ ಲ್ಯಾಂಡಿಂಗ್ ವೇಳೆ ಏಕಾಏಕಿ ನಿಯಂತ್ರಣ ಸಮಸ್ಯೆ ಎದುರಿಸಿ, ಸುಮಾರು ಮೂರು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿದ ಘಟನೆ ಭಾನುವಾರ ನಡೆದಿದೆ. ಕೊನೆಗೆ ವಿಮಾನವನ್ನು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಮಧ್ಯಾಹ್ನ 3 ಗಂಟೆಗೆ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನ, ಸಂಜೆ 4.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ, ಲ್ಯಾಂಡಿಂಗ್‌ಗೆ ಹಲವಾರು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದೆ, ವಿಮಾನವು ಮುಂಡಗೋಡ, ದಾವಣಗೆರೆ, ಶಿವಮೊಗ್ಗ ಪ್ರದೇಶಗಳಲ್ಲಿ ಸುತ್ತಾಡಿತು.
ಸ್ಥಿತಿ ಗಂಭೀರವಾಗುತ್ತಿದ್ದಂತೆ, ಸಂಜೆ 7.30ರ ಸುಮಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು.
ವಿಮಾನ ಲ್ಯಾಂಡಿಂಗ್ ವೇಳೆ ಉಂಟಾದ ತಾಂತ್ರಿಕ ದೋಷವೋ ಅಥವಾ ಹವಾಮಾನ ವೈಪರಿತ್ಯವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಡುವೆ, ವಿಮಾನ ದೀರ್ಘ ಕಾಲ ಆಗಸದಲ್ಲೇ ಸುತ್ತಾಡಿದ ಕಾರಣ ಪ್ರಯಾಣಿಕರಲ್ಲಿ ಆತಂಕ ಉಂಟಾಗಿ, ಕೆಲವರು ಕಣ್ಣೀರಿಟ್ಟ ಘಟನೆ ಕೂಡ ವರದಿಯಾಗಿದೆ.
ಘಟನೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ, ಪ್ರಯಾಣಿಕರ ಕುಟುಂಬಸ್ಥರು ಏರ್‌ಲೈನ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

