ಮಲೆ ಮಹದೇಶ್ವರ ಬೆಟ್ಟದಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಮಹಿಳೆ ಸಾವು

ಚಾಮರಾಜನಗರ: ಹನೂರು ಮಲೆ ಮಹದೇಶ್ವರ ಬೆಟ್ಟದಿಂದ ದೇವರ ದರ್ಶನವನ್ನು ಮಾಡಿಕೊಂಡು ಸ್ವಗ್ರಾಮಕ್ಕೆ ತೆರಳುವ ವೇಳೆ ಕೆಎಸ್ಆರ್ ಟಿ ಸಿ ಬಸ್ಸಿನ ಹಿಂಬದಿಯ ಬಾಗಿಲಿನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಳಬೆಟ್ಟ ಸಮೀಪದ ತಿರುವಿನಲ್ಲಿ ನಡೆದಿದೆ. ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿರುವ ಕೆಎಸ್ಸಾರ್ಟಿಸಿ ಅಧಿಕಾರಿಗಳು ತಕ್ಷಣವೇ ಪರಿಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಮದ್ದೂರು ತಾಲೂಕಿನ ಕರಡಗೆರೆ ಗ್ರಾಮದ ವಿನೋದ (45) ಎಂಬುವರು ಮಲೆ ಮಹದೇಶ್ವರ ಬೆಟ್ಟದಿಂದ ಹನೂರಿನ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಬಾಗಿಲು ಸಮೀಪದ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ತಾಳಬೆಟ್ಟದ ಮೂರನೇ ತಿರುವಿನಲ್ಲಿ ಬಸ್ ತಿರುಗಿದ ಸಂದರ್ಭದಲ್ಲಿ ಇವರು ಬಾಗಿಲಿನಿಂದ ರಸ್ತೆಗೆ ಉರುಳಿದ್ದು ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಮೃತಪಟ್ಟಿರುತ್ತಾರೆ.

KSRTC ಚಾಮರಾಜನಗರ ವಿಭಾಗದ ಸೆಕ್ಯೂರಿಟಿ ಆಫೀಸರ್ ಶಿವರಾಜು ಗೌಡ ಅವರು ಸ್ಥಳಕ್ಕಾಗಮಿಸಿ ಮೃತ ಕುಟುಂಬಕ್ಕೆ 25,000ಗಳನ್ನು ನೀಡಿ ಉಳಿದ 2,75,000 ರೂಪಾಯಿಗಳನ್ನು ದಾಖಲಾತಿ ಒದಗಿಸಿ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಈ ನಡುವೆ, ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಮಲೆ ಮಹದೇಶ್ವರ ಬೆಟ್ಟ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts