ಬೆಂಗಳೂರು: ಟಿಕೆಟ್ ರಾಕೆಟ್ ಪ್ರಕರಣದ ತನಿಖೆ ರೋಚಕ ಘಟ್ಟದಲ್ಲಿದ್ದು ಸಿಸಿಬಿ ಪೊಲೀಸರ ತನಿಖೆ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ಈ ನಡುವೆ ಸಿಸಿಬಿ ವಶದಲ್ಲಿರುವ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಅವರನ್ನು ಇಂದು ಬೆಳಿಗ್ಗೆ ಪೊಲೀಸರು ಕರೆದೊಯ್ದ ಸಂದರ್ಭದಲ್ಲಿ ಕೋಲಾಹಲದ ಸನ್ನಿವೇಶ ನಡೆಯಿತು.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಪೂಜಾರಿಗೆ 5 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆನ್ನಲಾದ ಪ್ರಕರಣದಲ್ಲಿ ಆರೋಪಿ ಚೈತ್ರಾ ಕುಂದಾಪುರ ಅವರು ಪೊಲೀಸರ ವಶದಲ್ಲಿದ್ದಾಗ ತೀವ್ರ ಅಸ್ವಸ್ಥರಾಜಿ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬಂಧಿತ ಆರೋಪಿಗಳಾದ ಚೈತ್ರಾ ಮತ್ತು ಇತರರನ್ನು ನ್ಯಾಯಾಲಯದ ಆದೇಶದಂತೆ 10 ದಿನಗಳ ಅವಧಿಗೆ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಪ್ರಕರಣ ಸಂಬಂಧ ಮಹತ್ವದ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಈ ನಡುವೆಯೇ ಇಂದು ಬೆಳಿಗ್ಗೆ ಚೈತ್ರಾ ಕುಂದಾಪುರ ಅವರು ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.