ಬೆಂಗಳೂರು:”3,000 ಸಾವಿರ ಕ್ಯೂಸೆಕ್ಸ್ ನೀರಿನಲ್ಲಿ ಕೆಆರ್ಎಸ್ ನಿಂದ ಒಂದು ಹನಿ ನೀರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “2,000 ಕ್ಯೂಸೆಕ್ಸ್ ನೀರು ಸಾಮಾನ್ಯವಾಗಿ ಹರಿದು ಹೋಗುತ್ತಿರುತ್ತದೆ. 1,000 ಕ್ಯೂಸೆಕ್ಸ್ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ರೈತರ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ರಾಜಿಯಾಗುವುದಿಲ್ಲ. ಮಂಡ್ಯ ಭಾಗದ ರೈತರ ಹಿತ ಮುಖ್ಯ” ಎಂದರು.
12,500 ಕ್ಯೂಸೆಕ್ಸ್ ನೀರಿಗೆ ತಮಿಳುನಾಡು ಬೇಡಿಕೆ ಇಟ್ಟಿತ್ತು, ನಿಮ್ಮ ಹೋರಾಟದಿಂದ ಸಮಿತಿ 3,000 ಕ್ಯೂಸೆಕ್ಸ್ ನೀರು ಬಿಡುಗಡೆಗೆ ಶಿಫಾರಸ್ಸು ಮಾಡಿದೆ. ಮತ್ತೊಮ್ಮೆ ಹೋರಾಟ ಏತಕ್ಕೆ ಎಂದರು.
ಹೋರಾಟಗಾರರ ಬಗ್ಗೆ ನಮಗೆ ತಕರಾರು ಇಲ್ಲ, ಅವರ ಜೊತೆ ನಾವಿರುತ್ತೇವೆ. ಸೆ.29 ರಂದು ಮತ್ತೊಮ್ಮೆ ಬಂದ್ ಎಂದು ಹೇಳಲಾಗುತ್ತಿದೆ, ಇದರಿಂದ ಸಾವಿರಾರು ಕೋಟಿ ವಹಿವಾಟು ಹಾಳಾಗುತ್ತದೆ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತದೆ ಬಂದ್ ಬೇಡ ಎಂದು ಮನವಿ ಮಾಡಿದರು.