ಬೆಂಗಳೂರು: ಹಾವೇರಿ ರೈತನ ಹೆಸರಲ್ಲೂ ಬಿಜೆಪಿಯವರು ಈಗ ರಾಜಕೀಯ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ವಕ್ಫ್ ವಿವಾದ ಕುರಿತಂತೆ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದರು.
ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಲ್ಯಾಂಡ್ ಜಿಹಾದ್ ಎಂದು ಹೇಳುತ್ತಿದ್ದಾರಲ್ಲ. ಅವರು ಈಗಲೇ ಯಾಕೆ ಮಾತನಾಡುತ್ತಿದ್ದಾರೆ? ನಿಮ್ಮ ಸರ್ಕಾರದ ಅವಧಿಯಲ್ಲಿ ನೋಟೀಸ್ ಕೊಟ್ಟಾಗ ಇವರೆಲ್ಲಾ ಬೆಟ್ಟು ಚೀಪುತ್ತಿದ್ದರಾ? ಶಶಿಕಲಾ ಜೊಲ್ಲೆ ಅವರ 2021ರಲ್ಲಿ ನೀಡಿರುವ ಹೇಳಿಕೆಯಲ್ಲಿ, ‘ಅನ್ವರ್ ಮಾನ್ಪಡಿ ವರದಿ ನೀಡಿದ್ದು, ವರದಿ ನೀಡಿ 9 ವರ್ಷವಾಗಿದ್ದರೂ ಯಾವುದೇ ಕ್ರಮವಾಗಿಲ್ಲ. ಅದಕ್ಕೆ ಅಂದಿನ ಸಿಎಂ ಯಡಿಯೂರಪ್ಪ ಅವರು ಹಾಗೂ ಅವರ ಕುಟುಂಬದವರು ಕಾಂಗ್ರೆಸ್ ನಾಯಕರೊಂದಿಗೆ ಶಾಮೀಲಾಗಿರುವುದೇ ಕಾರಣ ಎಂದು ಅನ್ವರ್ ಮಾನ್ಪಡೆ ಅವರು ಆರೋಪ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರ ಕುಟುಂಬ ಎಂದರೆ ಯಾರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ? ಆಗ ತೇಜಸ್ವಿ ಸೂರ್ಯ, ಯತ್ನಾಳ್ ಅವರ ರಕ್ತ ಕುದಿಯಲಿಲ್ಲವೇ? ಆಗ ಯಾರ ಸರ್ಕಾರವಿತ್ತು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಮೊದಲ ದಿನದಿಂದಲೂ ಈ ವರದಿಯನ್ನು ವಿರೋಧಿಸುತ್ತಲೇ ಬಂದಿದೆ. ಹೀಗಾಗಿ ಯಡಿಯೂರಪ್ಪ ಅವರು ಅನ್ವರ್ ಮಾನ್ಪಡೆ ಆರೋಪದ ಬಗ್ಗೆ ಉತ್ತರ ನೀಡಬೇಕು. ಶೋಭಾ ಕರಂದ್ಲಾಜೆ ಅವರು ಸಂಸತ್ತಿನಲ್ಲಿ ವಕ್ಫ್ ಆಸ್ತಿ ಬಗ್ಗೆ ಪ್ರಶ್ನೆ ಕೇಳಿದಾಗ, ಕೇಂದ್ರ ಸರ್ಕಾರವು ‘ನಾವು ವಕ್ಫ್ ಆಸ್ತಿಯನ್ನು ಜಿಐಎಸ್ ಮ್ಯಾಪಿಂಗ್ ಮಾಡಿ, ಬೌಂಡರಿ ಹಾಕುತ್ತಿದ್ದೇವೆ. ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಿ ವಕ್ಫ್ ಆಸ್ತಿಯನ್ನು ಸಂರಕ್ಷಣೆ ಮಾಡುತ್ತೇವೆ. ಈ ತಂತ್ರಜ್ಞಾನದ ಬಳಕೆಗಾಗಿ ಪ್ರತಿ ರಾಜ್ಯಕ್ಕೆ 12 ಕೋಟಿಯಂತೆ 350 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಹೇಳುತ್ತಾರೆ. ಈ ರೀತಿ ಹೇಳಿದಾಗ, ಸಂಸದರಾಗಿ ನೀವು ಕತ್ತೆ ಕಾಯುತ್ತಿದ್ದರೇ? ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ವಕ್ಫ್ ಆಸ್ತಿ ಬಗ್ಗೆ ಆಡಿರುವ ಮಾತುಗಳನ್ನು ಗಮನಿಸಿರಲಿಲ್ಲವೇ? ಈಗ ಜೆಪಿಸಿ ಸಮಿತಿ ನಾಟಕವಾಡುತ್ತಿದ್ದಾರೆ. ನಿನ್ನೆ ಜೆಪಿಸಿಯು ಬಿಜೆಪಿಯ ಸಮಿತಿಯಾಗಿದೆ. ಜಂಟಿ ಸಂಸದೀಯ ಸಮಿತಿಯ ಕಾರ್ಯವೈಖರಿಗೆ ಅದರದೇ ಆದ ವ್ಯವಸ್ಥೆ ಇದೆ. ಅವರು ಪ್ರವಾಸಿಗರಾಗಿ ರಾಜ್ಯಕ್ಕೆ ಭೇಟಿ ನೀಡಲಿ. ಈ ವಿಚಾರವಾಗಿ ಮಾಹಿತಿ ಕಲೆಹಾಕುವುದಾದರೆ, ಸಮಿತಿಯ ಇತರೆ ಸದಸ್ಯರು ಯಾಕೆ ಬಂದಿಲ್ಲ? ಸಮಿತಿಗೆ ಸಂಬಂಧವಿಲ್ಲದ ಬಿಜೆಪಿ ನಾಯಕರ ಜತೆ ವಿಚಾರಣೆ ನಡೆಸುತ್ತಿರುವುದೇಕೆ? ಎಂದೂ ಪ್ರಶ್ನೆ ಮಾಡಿದರು.
ಜಿಪಿಸಿ ಮೂಲಕ ಒತ್ತಡ ಹಾಕುವ ಪ್ರಯತ್ನ ನಡೆಸುತ್ತಿದೆ. ಜೆಪಿಸಿಯು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದೆ. ಜಾರ್ಖಂಡ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದ್ದಾಗ ಈ ರೀತಿ ಮಾಡುತ್ತಿರುವುದು ರಾಜಕೀಯ ದುರುದ್ದೇಶ ಎಂದು ಪ್ರಿಯಾಂಕ್ ಖರ್ಗೆ ಆರೋಪ ಮಾಡಿದರು.