ಸ್ವಾಮೀಜಿ ಮೇಲೆ ಕೇಸ್; ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ನೀಚ ರಾಜಕಾರಣ ಎಂದ ವಿಜಯೇಂದ್ರ

ಬೆಂಗಳೂರು: ಸ್ವಾಮೀಜಿ ಮೇಲೆ ಕೇಸ್ ಹಾಕುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ನೀಚ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ವಿಜಯೇಂದ್ರ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿಗಳು ತಮ್ಮ ಹೇಳಿಕೆಯ ಕುರಿತಂತೆ ಸೌಹಾರ್ದತೆಯನ್ನು ಪುಷ್ಠೀಕರಿಸಿ ಸೂಕ್ತ ಸ್ಪಷ್ಟನೆ ನೀಡಿ ವಿವಾದಕ್ಕೆ ಇತಿಶ್ರೀ ಹಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ಪ್ರಕರಣವನ್ನು ಇಷ್ಟಕ್ಕೇ ಕೈ ಬಿಡಬಹುದಾಗಿದ್ದ ಕಾಂಗ್ರೆಸ್ ಸರ್ಕಾರ ಸ್ವಾಮೀಜಿಗಳ ವಿರುದ್ಧ ದೂರು ದಾಖಲಾಗುವಂತೆ ನೋಡಿಕೊಂಡು ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಯುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ನೀಚ ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ದೇಶದ್ರೋಹಿಗಳು, ಸಮಾಜ ಘಾತುಕ ಶಕ್ತಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಒಬ್ಬ ಸಜ್ಜನಿಕೆಯ ಸಂತರೆಂದು ಕರೆಸಿಕೊಂಡಿರುವ ಹಿರಿಯ ಶ್ರೀಗಳ ಬಾಯ್ತಪ್ಪಿದ ಮಾತು ಕ್ರಿಮಿನಲ್ ಅಪರಾಧದಂತೆ ಕಂಡಿರುವುದು ವಿಪರ್ಯಾಸವೆನಿಸುತ್ತದೆ. ಪೂಜ್ಯ ಶ್ರೀಗಳು ತಾವು ಆಡಿದ ಮಾತುಗಳ ಕುರಿತು ಸೂಕ್ತ ಸ್ಪಷ್ಟನೆ ನೀಡಿ ಮುಸ್ಲಿಂ ಸಮುದಾಯದೊಂದಿಗಿನ ತಮ್ಮ ಬಾಂಧವ್ಯದ ಕುರಿತು ವಿವರಣೆ ನೀಡಿರುವಾಗ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಹಾಗೂ ಹಗರಣಗಳನ್ನು ಮುಚ್ಚಿಕೊಳ್ಳಲು ಸಣ್ಣ ಸಣ್ಣ ಪ್ರಕರಣಗಳನ್ನೂ ದೊಡ್ಡ ವಿವಾದವನ್ನಾಗಿಸಲು ಹೊರಟು ಜನರ ದಿಕ್ಕು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಲೇ ಇದೆ ಎಂದವರು ಟೀಕಿಸಿದ್ದಾರೆ.

ಚಂದ್ರಶೇಖರನಾಥ ಶ್ರೀಗಳಿಗೆ ನೋಟೀಸ್ ನೀಡಿ ವಿಚಾರಣೆಗೆ ಕರೆದಿರುವ ಈ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.

Related posts