ಇವಿ ಚಾರ್ಜಿಂಗ್ ಜಾಲ ನಿರ್ಮಾಣಕ್ಕೆ ಕೇಂದ್ರ ಬದ್ಧ: ಕುಮಾರಸ್ವಾಮಿ

ಬೆಂಗಳೂರು: ದೇಶದಲ್ಲಿ ಸ್ವಚ್ಛ ಚಲನಶೀಲತೆಯನ್ನು ಉತ್ತೇಜಿಸಲು ಆಧುನಿಕ ಹಾಗೂ ವಿಶ್ವಾಸಾರ್ಹ ಇವಿ ಚಾರ್ಜಿಂಗ್ ವ್ಯವಸ್ಥೆ ನಿರ್ಮಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ “ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ರಾಷ್ಟ್ರವ್ಯಾಪಿ ಇವಿ ಚಾರ್ಜಿಂಗ್ ಮೂಲಸೌಕರ್ಯ” ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪಿಎಂ ಇ-ಡ್ರೈವ್ ಯೋಜನೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವಾಹನ ಬಳಕೆಯನ್ನು ಸುಲಭ ಮತ್ತು ಕೈಗೆಟುಕುವಂತೆ ಮಾಡುವ ಸರ್ಕಾರದ ಸಂಕಲ್ಪದ ಭಾಗವಾಗಿದೆ ಎಂದರು.

ಕರ್ನಾಟಕದಲ್ಲಿ ₹123.26 ಕೋಟಿ ವೆಚ್ಚದಲ್ಲಿ 1,243 ಇವಿ ಚಾರ್ಜರ್‌ಗಳನ್ನು ಸ್ಥಾಪಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಇಲ್ಲಿಯವರೆಗೆ ವಿವಿಧ ರಾಜ್ಯಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ 4,874 ಇವಿ ಚಾರ್ಜರ್‌ಗಳ ಸ್ಥಾಪನೆಗಾಗಿ ₹503.86 ಕೋಟಿ ಮೌಲ್ಯದ ಯೋಜನೆಗಳಿಗೆ ಕೇಂದ್ರ ಅನುಮೋದನೆ ನೀಡಿದೆ.

ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಗುಜರಾತ್, ರಾಜಸ್ಥಾನ, ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಎಚ್‌ಪಿಸಿಎಲ್, ಐಒಸಿಎಲ್ ಹಾಗೂ ಬಿಪಿಸಿಎಲ್ ಸಂಸ್ಥೆಗಳೂ ಯೋಜನೆಯಲ್ಲಿ ಭಾಗಿಯಾಗಿವೆ.

ಭಾರೀ ಕೈಗಾರಿಕಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹನೀಫ್ ಖುರೇಷಿ ಮಾತನಾಡಿ, PM E-DRIVE ಯೋಜನೆ ದೇಶಾದ್ಯಂತ ಭವಿಷ್ಯೋನ್ಮುಖ ಇವಿ ಚಾರ್ಜಿಂಗ್ ಜಾಲ ನಿರ್ಮಾಣಕ್ಕೆ ಅಡಿಪಾಯವಾಗಲಿದೆ ಎಂದರು.

ಒಟ್ಟು ₹10,900 ಕೋಟಿ ವೆಚ್ಚದ PM E-DRIVE ಯೋಜನೆಯಲ್ಲಿ ₹2,000 ಕೋಟಿಯನ್ನು ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಿಡಲಾಗಿದೆ.

Related posts