ಸಿಎಂ ಅವರ ನಕಲಿ ವರ್ಗಾವಣೆ ಶಿಫಾರಸು ಪತ್ರ ವೈರಲ್ ಆರೋಪ; ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ದೂರು

ಬೆಂಗಳೂರು: ಅಧಿಕಾರಿಯ ವರ್ಗಾವಣೆಗಾಗಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎಂಬಂತಿರುವ ಶಿಫಾರಸು ಪತ್ರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಆರೋಪದ ನಡುವೆಯೇ ಅಧಿಕಾರಿ ವರ್ಗಾವಣೆ ಶಿಫಾರಸು ವಿಚಾರವನ್ನು ಮುಂದಿಟ್ಟು ಬಿಜೆಪಿ ನಾಯಕರು ರಾಜ್ಯ ಸರ್ಕಾರಕ್ಕೆ ಮುಜುಗರದ ಸನ್ನಿವೇಶವನ್ನು ತಂದಿಟ್ಟಿದ್ದಾರೆ. ಇದರಿಂದ ಕೆರಳಿರುವ ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಅವರು ಬಿಜೆಪಿ ಶಾಸಕರಾದ ಸುನಿಲ್ ಕುಮಾರ್ ಹಾಗೂ ರವಿಕುಮಾರ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಮುಖ್ಯಮಂತ್ರಿ ಅವರ ನಕಲಿ ವರ್ಗಾವಣೆ ಪತ್ರವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಕೋರಿ ರಮೇಶ್ ಬಾಬು ಅವರು ದೂರು ನೀಡಿದ್ದಾರೆ.

ಮುಖ್ಯಮಂತ್ರಿಗಳ ಹೆಸರಿನಲ್ಲಿ ನಕಲಿ/ಕಟ್ಟುಕತೆ ವರ್ಗಾವಣೆ ಪತ್ರವನ್ನು ತಯಾರಿಸಿ ಅದನ್ನು ಈ ದಿನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ. ಆ ನಕಲಿ ಪತ್ರದ ಆಧಾರದ ಮೇಲೆ ಭ್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿರುವ ರಮೇಶ್ ಬಾಬು, ದಿನಾಂಕ ಇಲ್ಲದ, ಉಲ್ಲೇಖ ಸಂಖ್ಯೆ ಇಲ್ಲದ 2024ರ ಪತ್ರ ಸೃಷ್ಟಿಸಿ ಅಪಪ್ರಚಾರ ಮಾಡಿ, ವ್ಯಕ್ತಿತ್ವಕ್ಕೆ ಮಸಿ ಬಳಿದು ಚಾರಿತ್ರ್ಯ ಹರಣ ಮಾಡುವ ಕೆಲಸ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಜಕೀಯ ಲಾಭ ಪಡೆಯಲು ಸುಳ್ಳು ಪ್ರಚಾರ ನಡೆಸುವುದು ಗಂಭೀರ ಅಪರಾಧವಾಗಿದ್ದು, ವಿಶೇಷವಾಗಿ,ಸರ್ಕಾರಿ ದಾಖಲೆಗಳ ಕಟ್ಟುಕತೆ (Forgery), ಸುಳ್ಳು ದಾಖಲೆಗಳನ್ನು ನಿಜವೆಂದು ಬಳಕೆ, ಮಾನಹಾನಿ,ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟುಮಾಡುವ ಸುಳ್ಳು ಮಾಹಿತಿ ಪ್ರಸಾರ, ಅಪರಾಧ ಸಂಚುಗಳಿಂದ ಕೂಡಿರುತ್ತದೆ. ಇವುಗಳು Bharatiya Nyaya Sanhita, 2023 ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ. ಚುನಾಯಿತ ಜನಪ್ರತಿನಿಧಿಗಳಿಂದ ಇಂತಹ ಕೃತ್ಯ ನಡೆಯುವುದು ಅತ್ಯಂತ ಗಂಭೀರ ವಿಷಯವಾಗಿದ್ದು, ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂದು ವಕೀಲರೂ ಆಗಿರುವ ರಮೇಶ್ ಬಾಬು ಆರೋಪಿಸಿದ್ದಾರೆ.

ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರ ವಿರುದ್ಧ ತಕ್ಷಣ FIR ದಾಖಲಿಸಬೇಕು, ನಕಲಿ ಪತ್ರದ ಫೊರೆನ್ಸಿಕ್ ಪರಿಶೀಲನೆ ನಡೆಸಲು
ಸಾಮಾಜಿಕ ಜಾಲತಾಣಗಳಲ್ಲಿ ಮೂಲ ಮೂಲವನ್ನು ಪತ್ತೆಹಚ್ಚಬೇಕು, ಹಾಗೂ ಮತ್ತಷ್ಟು ಪ್ರಸಾರ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

Related posts