ಇತ್ತೀಚಿನ ದಿನಗಳಲ್ಲಿ ಪ್ರಿಡಿಯಾಬಿಟಿಸ್ ಮತ್ತು ಟೈಪ್-2 ಮಧುಮೇಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಪದ್ಧತಿಯತ್ತ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. ವಿಶೇಷವಾಗಿ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಪ್ರಶ್ನೆ ಸಾಮಾನ್ಯವಾಗಿದೆ.
ತಜ್ಞರ ಪ್ರಕಾರ, ಮಧುಮೇಹ ಇರುವವರು ಎಲ್ಲಾ ಸಿಹಿ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು.

ಈ ಪೈಕಿ ಸೇಬು ಉತ್ತಮ ಆಯ್ಕೆಯಾಗಿದೆ ಎಂದು ವೈದ್ಯರು ಹೇಳುತ್ತಾರೆ. ಸೇಬಿನಲ್ಲಿ ಕರಗುವ ಫೈಬರ್, ವಿಟಮಿನ್ ಸಿ ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಜೊತೆಗೆ ಇದು ಕಡಿಮೆ ಅಥವಾ ಮಧ್ಯಮ ಗ್ಲೈಸೆಮಿಕ್ ಇಂಡೆಕ್ಸ್ (GI) ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣ ಏರಿಕೆಯಾಗುವುದನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಸೇಬಿನಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಸಕ್ಕರೆ ಶೋಷಣೆಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಇದರಿಂದ ಹೊಟ್ಟೆ ತುಂಬಿದ ಅನುಭವವೂ ಹೆಚ್ಚು ಕಾಲ ಇರುತ್ತದೆ.
ತಜ್ಞರ ಸಲಹೆಯಂತೆ, ಊಟಕ್ಕೂ ಮುನ್ನ ಅಥವಾ ಮಧ್ಯಾಹ್ನದ ತಿಂಡಿಯಾಗಿ ಸೇಬನ್ನು ಸೇವಿಸುವುದು ಉತ್ತಮ. ಆದರೆ ಮಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ. ಮಧುಮೇಹ ಹೊಂದಿರುವವರು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆಯಂತೆ ಆಹಾರ ಪದ್ಧತಿ ಅನುಸರಿಸುವುದು ಒಳಿತು

