ನವದೆಹಲಿ: ಬ್ಯಾಂಕಿಂಗ್ ದಾಖಲೆಗಳನ್ನು ನ್ಯಾಯಾಲಯದ ಕಲಾಪಗಳಲ್ಲಿ ಸಾಕ್ಷ್ಯವಾಗಿ ಬಳಸುವ ನಿಯಮಗಳನ್ನು ಆಧುನೀಕರಿಸುವ ‘ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಆಕ್ಟ್ 2026’ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಈ ಮೂಲಕ 1891ರ ಹಳೆಯ ಕಾಯ್ದೆ ಬದಲಾಗಲಿದ್ದು, ತಂತ್ರಜ್ಞಾನ-ತಟಸ್ಥ ಕಾನೂನು ಚೌಕಟ್ಟು ಜಾರಿಗೆ ಬರಲಿದೆ.
ಆಗಸ್ಟ್ 13ರಂದು ರಾಷ್ಟ್ರಪತಿಗಳ ಅಂಕಿತ ಪಡೆದಿರುವ ಹೊಸ ಕಾಯ್ದೆಯು ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ತಾಂತ್ರಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಬ್ಯಾಂಕಿಂಗ್ ದಾಖಲೆಗಳಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಸರಳಗೊಳಿಸುವ ಉದ್ದೇಶ ಹೊಂದಿದೆ.
ಹೊಸ ಕಾಯ್ದೆಯಡಿ ಭೌತಿಕ ದಾಖಲೆಗಳ ಜತೆಗೆ ಎಲೆಕ್ಟ್ರಾನಿಕ್, ಡಿಜಿಟಲ್, ವರ್ಚುವಲ್, ಕ್ಲೌಡ್ ಆಧಾರಿತ ಸೇರಿದಂತೆ ಸಮಕಾಲೀನ ಸ್ವರೂಪಗಳಲ್ಲಿ ನಿರ್ವಹಿಸಲಾದ ಬ್ಯಾಂಕಿಂಗ್ ದಾಖಲೆಗಳಿಗೂ ಕಾನೂನು ಮಾನ್ಯತೆ ದೊರೆಯಲಿದೆ.
ಬ್ಯಾಂಕುಗಳು ದಾಖಲೆಗಳ ನಿರ್ವಹಣೆ ಮತ್ತು ಸಂಸ್ಕರಣೆಯಲ್ಲಿ ಡಿಜಿಟಲ್ ವ್ಯವಸ್ಥೆಗಳನ್ನು ಹೆಚ್ಚಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಕಲಾಪಗಳಲ್ಲಿ ಇಂತಹ ದಾಖಲೆಗಳನ್ನು ಸಾಕ್ಷ್ಯವಾಗಿ ಮಂಡಿಸಲು ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ.
ಬ್ಯಾಂಕಿಂಗ್ ದಾಖಲೆಗಳ ಪ್ರಮಾಣೀಕರಣ ಪ್ರಕ್ರಿಯೆಯನ್ನೂ ಕಾಯ್ದೆ ಸರಳಗೊಳಿಸಿದೆ. ಇನ್ನು ಮುಂದೆ ಮ್ಯಾನುವಲ್, ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ಸಹಿಗಳ ಮೂಲಕ ದಾಖಲೆಗಳನ್ನು ಪ್ರಮಾಣೀಕರಿಸಲು ಅವಕಾಶವಿದೆ. ಇದರಿಂದ ನ್ಯಾಯಾಲಯಕ್ಕೆ ಬ್ಯಾಂಕ್ ದಾಖಲೆಗಳನ್ನು ಹಾಜರುಪಡಿಸುವ ಪ್ರಕ್ರಿಯೆ ಸುಗಮವಾಗಲಿದೆ.

ಬ್ಯಾಂಕ್ ಸ್ವತಃ ಪ್ರಕರಣದ ಪಕ್ಷಕಾರನಾಗಿರದ ಸಂದರ್ಭದಲ್ಲೂ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವ ಕುರಿತು ಹೊಸ ಕಾಯ್ದೆ ಸ್ಪಷ್ಟತೆ ನೀಡಿದೆ.
ಅಂತಹ ಸಂದರ್ಭಗಳಲ್ಲಿ ಬ್ಯಾಂಕ್ ಅಧಿಕಾರಿಯನ್ನು ಕರೆಸುವ ಮೊದಲು ನ್ಯಾಯಾಲಯವು ಲಿಖಿತ ರೂಪದಲ್ಲಿ ‘ವಿಶೇಷ ಕಾರಣ’ ದಾಖಲಿಸಬೇಕಾಗುತ್ತದೆ. ಇದರಿಂದ ಕಾನೂನು ಪ್ರಕ್ರಿಯೆಗಳಲ್ಲಿ ಬ್ಯಾಂಕ್ ಸಿಬ್ಬಂದಿಯ ಅನಗತ್ಯ ಒಳಗೊಳ್ಳುವಿಕೆ ತಪ್ಪಿಸುವ ಉದ್ದೇಶ ಹೊಂದಲಾಗಿದೆ.
ನಿರ್ದಿಷ್ಟ ಹಣಕಾಸು ವಲಯದ ಸಂಸ್ಥೆಗಳು ಅಥವಾ ಸಂಸ್ಥೆಗಳ ವರ್ಗಗಳಿಗೆ ಕಾಯ್ದೆಯ ನಿಬಂಧನೆಗಳನ್ನು ವಿಸ್ತರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಹಣಕಾಸು ಕ್ಷೇತ್ರದಲ್ಲಿ ಹೊಸ ಮಾದರಿಯ ಸಂಸ್ಥೆಗಳು ಹಾಗೂ ತಂತ್ರಜ್ಞಾನಗಳು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಚೌಕಟ್ಟನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಇದು ಅವಕಾಶ ಕಲ್ಪಿಸಲಿದೆ.
ಸೆಪ್ಟೆಂಬರ್ 10ರಂದು ಹೊರಡಿಸಲಾದ ಅಧಿಸೂಚನೆಯಂತೆ ಕಾಯ್ದೆ ಅಕ್ಟೋಬರ್ 1, 2026ರಿಂದ ಜಾರಿಗೆ ಬರಲಿದೆ. ಕಾನೂನು ವ್ಯವಸ್ಥೆಯನ್ನು ಆಧುನೀಕರಿಸುವುದು, ಹಣಕಾಸು ಕ್ಷೇತ್ರವನ್ನು ಬಲಪಡಿಸುವುದು ಹಾಗೂ ‘ವ್ಯಾಪಾರ ಸುಗಮಗೊಳಿಸುವಿಕೆ’ಗೆ ಉತ್ತೇಜನ ನೀಡುವುದು ಸುಧಾರಣೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ಸರ್ಕಾರ ತಿಳಿಸಿದೆ.

