ಜಲಮೂಲಗಳಿಗೆ ಕೊಳಚೆ ನೀರು ಸೇರುವುದಕ್ಕೆ ಕಡಿವಾಣ, STPಗಳ ಸಾಮರ್ಥ್ಯವರ್ಧನೆಗೆ ತ್ವರಿತ ಕ್ರಮ: ರಾಮಲಿಂಗಾ ರೆಡ್ಡಿ

ಬೆಂಗಳೂರು: ನಗರದಲ್ಲಿ ಸಂಸ್ಕರಿಸದ ಹಾಗೂ ಭಾಗಶಃ ಸಂಸ್ಕರಿಸಿದ ಒಳಚರಂಡಿ ನೀರು ಜಲಮೂಲಗಳಿಗೆ ಸೇರುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು ನಗರದ ಒಳಚರಂಡಿ ನೀರಿನ ನಿರ್ವಹಣೆ ಹಾಗೂ ಒಳಚರಂಡಿ ಸಂಸ್ಕರಣಾ ಘಟಕಗಳ (STP) ಸ್ಥಾಪನೆ ಮತ್ತು ಸಾಮರ್ಥ್ಯವರ್ಧನೆ ಕುರಿತು ಗುರುವಾರ ನಡೆದ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಪರಿಸರ ಭವನದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷರು ನಗರದ ಒಳಚರಂಡಿ ನಿರ್ವಹಣೆಯ ವಿವರಗಳನ್ನು ಸಚಿವರಿಗೆ ನೀಡಿದರು.

ಬೆಂಗಳೂರು ನಗರಕ್ಕೆ ಪ್ರಸ್ತುತ ಕಾವೇರಿ ಹಾಗೂ ಕೊಳವೆಬಾವಿ ಸೇರಿದಂತೆ ದಿನಕ್ಕೆ 2,825 ದಶಲಕ್ಷ ಲೀಟರ್ (MLD) ನೀರು ಪೂರೈಕೆಯಾಗುತ್ತಿದ್ದು, ಸುಮಾರು 2,580 MLD ಒಳಚರಂಡಿ ನೀರು ಉತ್ಪತ್ತಿಯಾಗುತ್ತಿದೆ. BWSSB ಅಡಿಯಲ್ಲಿ 37 STPಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಒಟ್ಟು ಸಂಸ್ಕರಣಾ ಸಾಮರ್ಥ್ಯ 1,364.5 MLD ಇದೆ. ಹೀಗಾಗಿ 1,215.5 MLD ಸಾಮರ್ಥ್ಯದ ಕೊರತೆ ಇದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ವಿವಿಧ ಯೋಜನೆಗಳಡಿ 42 STPಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟು 1,147 MLD ಸಾಮರ್ಥ್ಯ ಹೊಂದಿವೆ. ಅಸ್ತಿತ್ವದಲ್ಲಿರುವ ಘಟಕಗಳ ಉನ್ನತೀಕರಣ ಮತ್ತು ಸಾಮರ್ಥ್ಯವರ್ಧನೆಯ ಮೂಲಕ ಮತ್ತಷ್ಟು 60 MLD ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಇದರಿಂದ ಒಟ್ಟು ಕೊರತೆ 8.5 MLDಗೆ ಇಳಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

2026ರ ಡಿಸೆಂಬರ್‌ಗೆ 7 ಘಟಕ:

ನಿರ್ಮಾಣ ಹಂತದಲ್ಲಿರುವ STPಗಳ ಪೈಕಿ 51 MLD ಸಾಮರ್ಥ್ಯದ ಏಳು ಘಟಕಗಳನ್ನು ಡಿಸೆಂಬರ್ 2026ರೊಳಗೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ. 413 MLD ಸಾಮರ್ಥ್ಯದ 17 ಘಟಕಗಳು ಡಿಸೆಂಬರ್ 2027ರೊಳಗೆ, 148 MLD ಸಾಮರ್ಥ್ಯದ ಒಂಬತ್ತು ಘಟಕಗಳು ಡಿಸೆಂಬರ್ 2028ರೊಳಗೆ ಹಾಗೂ 535 MLD ಸಾಮರ್ಥ್ಯದ ಒಂಬತ್ತು ಘಟಕಗಳು ಡಿಸೆಂಬರ್ 2029ರೊಳಗೆ ಪೂರ್ಣಗೊಳ್ಳಲಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.

30 ದಿನಗಳ ಗಡುವು:

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಹಾಗೂ KSPCB ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಎಲ್ಲ STPಗಳು ಕಾರ್ಯನಿರ್ವಹಿಸುವುದನ್ನು BWSSB ಖಚಿತಪಡಿಸಬೇಕು ಎಂದು ಸಚಿವರು ಸೂಚಿಸಿದರು. ಮಾನದಂಡ ಪಾಲಿಸದಿರುವ ಕೆಲವು ಘಟಕಗಳನ್ನು ಗುರುತಿಸಲಾಗಿದ್ದು, ಅವುಗಳನ್ನು 30 ದಿನಗಳೊಳಗೆ ನಿಗದಿತ ಗುಣಮಟ್ಟಕ್ಕೆ ತರಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಅಪಾರ್ಟ್‌ಮೆಂಟ್‌ಗಳು, ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು ಹಾಗೂ ಕಚೇರಿ ಕಟ್ಟಡಗಳಲ್ಲಿರುವ ಖಾಸಗಿ STPಗಳನ್ನೂ KSPCB ಅಧಿಕಾರಿಗಳು ಪರಿಶೀಲಿಸಬೇಕು. ಅವುಗಳು ನಿಗದಿತ ಮಾನದಂಡದಂತೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ಮಳೆನೀರು ಚರಂಡಿಗೆ ಕೊಳಚೆ ಸೇರುವುದಕ್ಕೆ ಕಡಿವಾಣ:

ಮಳೆನೀರು ಚರಂಡಿಗಳ ಮೂಲಕ ಹರಿಯುತ್ತಿರುವ ಒಳಚರಂಡಿ ನೀರನ್ನು STPಗಳಿಗೆ ತಲುಪಿಸಲು ಅಗತ್ಯವಿರುವ ಕಡೆಗಳಲ್ಲಿ ಬಾಕಿ ಇರುವ ‘ಮಿಸ್ಸಿಂಗ್ ಬಿಟ್ಸ್’ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಂಪರ್ಕ ಕಲ್ಪಿಸುವಂತೆ BWSSBಗೆ ಸೂಚಿಸಿದರು. ಹಾನಿಗೊಂಡಿರುವ ಮ್ಯಾನ್‌ಹೋಲ್‌ಗಳನ್ನು ತುರ್ತಾಗಿ ದುರಸ್ತಿ ಅಥವಾ ಪುನರ್‌ನಿರ್ಮಾಣ ಮಾಡುವಂತೆಯೂ ನಿರ್ದೇಶಿಸಿದರು.

ಪೀಣ್ಯ, ಜಿಗಣಿ ಸೇರಿದಂತೆ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ದ್ರವ ಮತ್ತು ಘನ ತ್ಯಾಜ್ಯದ ನಿರ್ವಹಣೆ ಕುರಿತು KSPCB ಹಾಗೂ BWSSB ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದರು.

ಇದಲ್ಲದೆ, ನಿರ್ಮಾಣ ಹಂತದಲ್ಲಿರುವ ಎಲ್ಲ STPಗಳ ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಒಳಚರಂಡಿ ಜಾಲವ್ಯವಸ್ಥೆ ಇರುವ ಪ್ರದೇಶಗಳಲ್ಲಿ ಇನ್ನೂ ಸಂಪರ್ಕ ಪಡೆಯದ ನಿವಾಸಿಗಳನ್ನು ಗುರುತಿಸಿ ಅಧಿಕೃತ ಸಂಪರ್ಕ ಒದಗಿಸಬೇಕು. ಅಕ್ರಮ ಒಳಚರಂಡಿ ಸಂಪರ್ಕಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಸಚಿವರು ಸೂಚಿಸಿದರು.

Related posts