ಬೆಂಗಳೂರು: ಬೆಂಗಳೂರು ಅಭಿವೃದ್ಧಿಗೆ ವೇಗ ನೀಡುವ ಹಾಗೂ ನಾಗರಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಾಲ್ಕು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
2008ರ ಜುಲೈ 10ಕ್ಕೂ ಮೊದಲು ನಿರ್ಮಿಸಿರುವ ಅರ್ಹ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ ಸ್ವಇಚ್ಛೆಯಿಂದ ಭೂಮಿ ನೀಡಿ ನಗದು ಪರಿಹಾರ ಪಡೆದ ಅರ್ಹ ಭೂಮಾಲೀಕರಿಗೆ ಪ್ರೋತ್ಸಾಹದಾಯಕ ನಿವೇಶನ ಹಂಚಿಕೆ ಮಾಡಲಾಗುತ್ತದೆ.

ಇದರೊಂದಿಗೆ ಬಿಡಿಎ ನಿವೇಶನಗಳ ಪಕ್ಕದ ಅಂಚಿನ ಜಾಗ ಹಂಚಿಕೆ ಹಾಗೂ ಗುತ್ತಿಗೆ ಅವಧಿ ಮುಗಿದಿರುವ ನಿವೇಶನಗಳಿಗೆ ಶುದ್ಧ ಕ್ರಯಪತ್ರ ನೋಂದಣಿ ಮಾಡಿಸಲು ವಿಶೇಷ ಮೇಳ ಆಯೋಜಿಸಲಾಗುತ್ತದೆ.
ಅರ್ಹ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ನಾಗರಿಕರ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾದ ಕ್ರಮಗಳಿಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

