ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾದ ಪರಿಷತ್ ಬಿಜೆಪಿ ಟಿಕೆಟ್

ಬೆಂಗಳೂರು: ರಾಜ್ಯದ ಆಡಳಿತಾರೂಢ ಬಿಜೆಪಿ ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಅಚ್ಚರಿಯ ತೀರ್ಮಾನವೊಂದರಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಎಚ್.ವಿಶ್ವನಾಥ್ ಅವರ ಎಂಎಲ್ ಸಿ ಕನಸು ಭಗ್ನಗೊಂಡಿದೆ. ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ ಹೈಕಮಾಂಡ್ ಎಚ್ ವಿಶ್ವನಾಥ್ ಅವರ ಹೆಸರನ್ನು ಕೈಬಿಟ್ಟಿದೆ.

ವಿಧಾನ ಪರಿಷತ್ ನಲ್ಲಿ ತೆರವಾಗಿರುವ ಸ್ಥಾನಗಳ ಪೈಕಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಸಹಕರಿಸಿದವರಿಗೆ ಟಿಕೆಟ್ ನೀಡಲು ರಾಜ್ಯದ ನಾಯಕರು ನಿರ್ಧರಿಸಿದ್ದರು. ಹಾಗಾಗಿ ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಎಚ್ ವಿಶ್ವನಾಥ್ ಹೆಸರಿಗೆ ಆದ್ಯತೆ ನೀಡಲಾಗಿತ್ತು.

ರಾಜ್ಯ ಬಿಜೆಪಿ ಕೋರ್‌ ಕಮಿಟಿ ಕೂಡಾ ಈ ಮೂವರ ಹೆಸರನ್ನು ಸೇರಿಸಿ 10 ಮಂದಿಯ ಹೆಸರನ್ನು ಹೈಕಮಾಂಡ್’ಗೆ ಕಳುಹಿಸಿತ್ತು. ಬಿಜೆಪಿ ಹೈಕಮಾಂಡ್ ಬುಧವಾರ ರಾತ್ರಿ ಪಟ್ಟಿ ಬಿಡುಗಡೆ ಮಾಡಿದ್ದು, ಎಂಟಿಬಿ ನಾಗರಾಜ್, ಆರ್.ಶಂಕರ್, ಸುನೀಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.

Related posts