BMTCಯಲ್ಲಿ ಸಾರಿಗೆ ಆಶಾಕಿರಣ ; 28100 ನೌಕರರ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ.. ಮೃತ ನೌಕರರ ಅವಲಂಬಿತರಿಗೆ ಪರಿಹಾರದ‌ ಚೆಕ್..

ಬೆಂಗಳೂರು: ಬಿಎಂಟಿಸಿ‌ಯಲ್ಲಿ ಸಾರಿಗೆ ಆಶಾಕಿರಣ ಯೋಜನೆಯಡಿ 28100 ನೌಕರರ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಮತ್ತು ಮೃತ ನೌಕರರ ಅವಲಂಬಿತರಿಗೆ ಪರಿಹಾರದ‌ ಚೆಕ್ ವಿತರಣೆ ಮಾಡಲಾಗಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆದಿದೆ ಎಂದು ಬಿಎಂಟಿಸಿ ತಿಳಿಸಿದೆ.

BMTCಯು ಸಿ-ಕ್ಯಾಂಪ್ ಸಹಯೋಗದಲ್ಲಿ ನೌಕರರ ಆರೋಗ್ಯದ ಹಿತದೃಷ್ಟಿಯಿಂದ 50 ಘಟಕಗಳಲ್ಲಿ ಹಾಗೂ 4 ಕಾರ್ಯಾಗಾರಗಳಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಿದ್ದು, ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಪಾಸಣೆಗೆ ಒಳಪಡುವ ನೌಕರರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ 50 ಲಕ್ಷ ರೂ ಹಾಗೂ ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಅಕಾಲಿಕ ಮರಣ ಹೊಂದಿದ ನೌಕರರ ಅವಲಂಬಿತರಿಗೆ 10 ಲಕ್ಷ ರೂ ನೀಡಲಾಗುತ್ತಿದೆ ಎಂದರು. 2024ರ ಫೆಬ್ರವರಿ–2025ರ ಏಪ್ರಿಲ್ ವರೆಗೆ 107 ನೌಕರರ ಕುಟುಂಬಗಳಿಗೆ ರೂ. 7.3 ಕೋಟಿ ಪರಿಹಾರ ಪಾವತಿ ಮಾಡಲಾಗಿದೆ ಎಂದವರು ವಿವರಿಸಿದರು.

ಮಂಗಳವಾರ 12 ಸಿಬ್ಬಂದಿ ಕುಟುಂಬಕ್ಕೆ, ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಅಕಾಲಿಕ ಮರಣ ಹೊಂದಿದ ನೌಕರರ ಅವಲಂಬಿತರಿಗೆ ರೂ.10 ಲಕ್ಷ ಚೆಕ್ ವಿತರಣೆ ಮಾಡಲಾಗಿದೆ. ಸಿಬ್ಬಂದಿಗಳ ಜೀವ ಅಮೂಲ್ಯ, ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಆದರೆ ಅವರ ಕುಟುಂಬದವರೊಡನೆ ಸಂಸ್ಥೆ ಸದಾ ನಿಲ್ಲುತ್ತದೆ. ಆರ್ಥಿಕವಾಗಿ ಎಷ್ಟು ಸಹಾಯ ಮಾಡಲು ಸಾಧ್ಯವೋ ಅದನ್ನೆಲ್ಲವನ್ನು ಮಾಡುತ್ತಿದ್ದೇವೆ, ಮಕ್ಕಳ ವಿದ್ಯಾಭ್ಯಾಸ, ಮುಂದಿನ‌ ಜೀವನೋಪಾಯಕ್ಕೆ ಒಂದು ದಾರಿ ಆಗಲಿ ಎಂಬ ಸದುದ್ದೇಶ ನಮ್ಮದಾಗಿದೆ ಎಂದು ರಾಮಲಿಂಗ ರೆಡ್ಡಿ ತಿಳಿಸಿದರು.

BMTCಯು ಏರೋ ಇಂಡಿಯಾ–2025 ಕಾರ್ಯಕ್ರಮದಲ್ಲಿ ಶ್ಲಾಘನೀಯ ಸೇವೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಶ್ಲಾಘನಾ ಪತ್ರ ನೀಡಿದ್ದಾರೆ . 3 ದಿನಗಳಲ್ಲಿ, 364 ಬಸ್ಸುಗಳು, 199 ವಿಶೇಷ ಸಾರಿಗೆ ಸೇವೆಗಳು ಸೇವೆ ನೀಡಿದ್ದು, 16,932 ಪ್ರಯಾಣಿಕರ ಪ್ರಯೋಜನ ಪಡೆದಿದ್ದಾರೆ. ಈ ಮೂಲಕ ರೂ. 75.40 ಲಕ್ಷ ಆದಾಯಗಳಿಸಿದೆ ಎಂದವರು ತಿಳಿಸಿದರು.

ಸಿಬ್ಬಂದಿಯ ಹಾಗೂ ಅವರ‌ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ‌‌ ಉತ್ತೇಜಿಸುವುದು ನಮ್ಮ ಕರ್ತವ್ಯ, ಹೆಮ್ಮೆ ಮತ್ತು ಗೌರವವೆಂದು ನಾವು ಭಾವಿಸಿದ್ದೇವೆ. ಅದರಂತೆ ‘ಮಾಸ್ಟರ್ ಗೇಮ್ಸ್–2025’ದಲ್ಲಿ ಕಬಡ್ಡಿ ಪ್ರಥಮ ಸ್ಥಾನ, ವಾಲಿಬಾಲ್ ತೃತೀಯ ಸ್ಥಾನ ಪಡೆದಿರುವ ಬಿ.ಎಂ.ಟಿ.ಸಿ‌‌ ತಂಡ ಮತ್ತು
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗಿದೆ. ಚಾಲಕ ವೈದ್ಯಪ್ಪ (ಘಟಕ 33)ರ ಪುತ್ರಿ ಕುಮಾರಿ ಸಹನಾ ಎಸ್.ವಿ (ಕೃಷಿ ಎಂ.ಎಸ್ಸಿ, ಚಿನ್ನದ ಪದಕ), ಚಾಲಕ ಲಕ್ಷ್ಮೀಕಾಂತ (ಘಟಕ 45)ರ ಪುತ್ರಿ ಕುಮಾರಿ ಸೌಮ್ಯ (ಎಸ್.ಎಸ್.ಎಲ್.ಸಿ – 621/625) ಅವರನ್ನು ಅಭಿನಂದಿಸಲಾಯಿತು ಎಂದು ಸಚಿವರು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಎನ್ ವಿ. ಪ್ರಸಾದ್, ಬಿಎಂಟಿಸಿ‌ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್, ನಿರ್ದೇಶಕರು (ಮಾಹಿತಿ ತಂತ್ರಜ್ಞಾನ) ಶಿಲ್ಪಾ, ಬಿಎಂಟಿಸಿ‌ ನಿರ್ದೇಶಕ ( ಭದ್ರತೆ) ಅಹದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts