ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ, ಬಾಕಿ ಪಾವತಿ ದೊರಕಿಸಲು ಕೇಂದ್ರ ಸಚಿವರು ಮುಂದಾಗಲಿ; ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ತಿರುಗೇಟು

ಬೆಂಗಳೂರು: ಕರ್ನಾಟಕದ ರೈತರು, ವಿಶೇಷವಾಗಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಕ್ಷುಲ್ಲಕ ರಾಜಕೀಯ ಟೀಕೆ ಹಾಗೂ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಕಳೆಯುವ ಬದಲು ರೈತರ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು ಎಂದು ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ, ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನರ ಬದುಕಿಗೆ ಸಂಬಂಧಿಸಿದ ಗಂಭೀರ ವಿಚಾರಗಳನ್ನು ಬದಿಗಿಟ್ಟು ಪರಸ್ಪರ ಟೀಕಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರ ಸಚಿವರಾಗಿ ರಾಜಕೀಯ ಅನುಭವ ಹೊಂದಿರುವ ಕುಮಾರಸ್ವಾಮಿ ಅವರು ವೈಯಕ್ತಿಕ ಟೀಕೆಗಳಿಗೆ ವ್ಯಯಿಸುವ ಸಮಯ ಮತ್ತು ಶಕ್ತಿಯನ್ನು ರೈತರ ಸಮಸ್ಯೆಗಳ ಪರಿಹಾರಕ್ಕೆ ಬಳಸಬೇಕು. ರಾಜ್ಯದ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಿಸುವುದು, ಬಾಕಿ ಪಾವತಿಗೆ ಕ್ರಮ ಕೈಗೊಳ್ಳುವುದು ಹಾಗೂ ಅಗತ್ಯ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ರೈತರ ಸಾಲದ ಹೊರೆ, ಬೆಳೆ ನಷ್ಟ, ಹೆಚ್ಚುತ್ತಿರುವ ಕೃಷಿ ವೆಚ್ಚ ಮತ್ತು ಆದಾಯದ ಅನಿಶ್ಚಿತತೆ ಕೃಷಿ ವಲಯದ ಪ್ರಮುಖ ಸವಾಲುಗಳಾಗಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ರೈತರ ಪರವಾಗಿ ಧ್ವನಿ ಎತ್ತುವುದು, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದು ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸುವುದು ಜವಾಬ್ದಾರಿಯುತ ನಾಯಕತ್ವದ ಭಾಗವಾಗಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವದ ಬಗ್ಗೆ ಟೀಕೆ-ಟಿಪ್ಪಣಿಗಳನ್ನು ಮಾಡುವ ಅಗತ್ಯವಿಲ್ಲ. ಅವರ ರಾಜಕೀಯ ಜೀವನ, ಆಡಳಿತ ಮತ್ತು ವ್ಯಕ್ತಿತ್ವದ ಕುರಿತು ಕರ್ನಾಟಕದ ಜನರಿಗೆ ತಮ್ಮದೇ ಆದ ತಿಳುವಳಿಕೆ ಇದೆ. ಇಂತಹ ವಿಚಾರಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುವುದಕ್ಕಿಂತ ಜನರ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.

ಕುಮಾರಸ್ವಾಮಿ ಅವರು ರಾಜಕೀಯ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು, ಕರ್ನಾಟಕದ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು. ರೈತರಿಗೆ ನ್ಯಾಯಯುತ ಬೆಲೆ, ಬಾಕಿ ಪಾವತಿ ಮತ್ತು ಅಗತ್ಯ ಪರಿಹಾರ ದೊರಕಿಸಲು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ನಿರ್ದಿಷ್ಟ ಕ್ರಮಗಳಿಗೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ರೈತರ ಬದುಕು ಮತ್ತು ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು. ವೈಯಕ್ತಿಕ ಟೀಕೆಗಳಿಂದ ರೈತರ ಸಂಕಷ್ಟಗಳು ದೂರವಾಗುವುದಿಲ್ಲ. ರೈತರಿಗೆ ನ್ಯಾಯ ದೊರಕಿಸಲು ಕೈಗೊಳ್ಳುವ ಕ್ರಮಗಳೇ ಮುಖ್ಯ ಎಂದು ಅವರು ಹೇಳಿದರು.

Related posts