ಬೆಂಗಳೂರು: ಪೊಲೀಸರು ಕಾನೂನು ಕಾಪಾಡುವವರೇ ಅಥವಾ ಖಾಸಗಿ ಕಂಪೆನಿಗಳ ಏಜೆಂಟರೇ ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉದಾಹರಣೆಯಂತಿದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರ ವಿರುದ್ಧದ ಆರೋಪ.
ಒಂದು ಕುತೂಹಲಕಾರಿ ದೂರೊಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸಲ್ಲಿಕೆಯಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯ ಕೆಲವು ಪೊಲೀಸರು ಖಾಸಗಿ ಕಂಪೆನಿಯ ನೌಕರ ಶಿವರಾಜ್ ಕುಮಾರ್ ಎಂಬವರನ್ನು ಠಾಣೆಗೆ ಕರೆಸಿ ದೌರ್ಜನ್ಯ ನಡೆಸಿ, ಬಲವಂತವಾಗಿ ರಾಜೀನಾಮೆ ಪತ್ರ ಬರೆಸಿಕೊಂಡಿದ್ದಾರೆನ್ನಲಾಗಿದೆ. ಶಿವರಾಜ್ ಕುಮಾರ್ ತಮಗಾಗಿರುವ ಅನ್ಯಾಯದ ಬಗ್ಗೆ ಡಿಜಿಪಿಯವರ ಗಮನಸೆಳೆದಿದ್ದಾರೆ. ಸಬ್ ಇನ್‌ಸ್ಪೆಕ್ಟರ್‌ಗಳಾದ ನಂದೀಶ್, ಆನಂದ್ ಹಾಗೂ ಮುಖ್ಯ ಪೇದೆ ವೆಂಕಟಸ್ವಾಮಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಏನಿದು ದೂರು?
ದೂರುದಾರ ಶಿವರಾಜ್ ಕುಮಾರ್ ಎಂಬವರು ಪೂರ್ವಗೆಂಜ್ ಕಂಪೆನಿಯ ಉದ್ಯೋಗಿಯಾಗಿದ್ದು, ಆ ಕಂಪೆನಿ ಶಬರಿ ಟೆಲಿಕಾಂ ಎಂಬ ಕಂಪೆನಿಯ ಗುತ್ತಿಗೆ ಕೆಲಸ ವಹಿಸಿದೆ. ಆ ಕೆಲಸಕ್ಕಾಗಿ ಶಿವರಾಜ್ ಕುಮಾರ್ ಅವರನ್ನು ನಿಯೋಜಿಸಿದ್ದ ಕಂಪೆನಿ ಸರಿಯಾಗಿ ವೇತನ ನೀಡಿಲ್ಲವಂತೆ. ಕಳೆದೊಂದು ವರ್ಷದಿಂದ ಅರಿಯರ್ಸ್ ಕೂಡಾ ಬಾಕಿಮಾಡಿದೆಯಂತೆ. ಈ ವೇತನ ಬಗ್ಗೆ ಕೇಳಿದರೆ ಪೊಲೀಸರ ಮೂಲಕ ಬೆದರಿಸಲಾಗುತ್ತಿತ್ತಂತೆ. ಇದರಿಂದ ನೊಂದ ಶಿವರಾಜ್ ಕುಮಾರ್, ಎನ್‌ಜಿಓ ಮೂಲಕ ಕಾರ್ಮಿಕ ಇಲಾಖೆಗೂ ದೂರು ನೀಡಿದ್ದಾರೆ. ಅಧಿಕಾರಿಗಳ ಮಧ್ಯಪ್ರವೇಶದ ನಂತರ 3 ತಿಂಗಳ ವೇತನವನ್ಬಷ್ಟೇ ಕಂಪೆನಿ ನೀಡಿದೆ. ಬಾಕಿ ಹಣವನ್ನು ಕೇಳಿದ್ದಕ್ಕೆ ಶಬರಿ ಟೆಲಿಕಾಂನ ಪ್ರದೀಪ್, ಬೋರೇಗೌಡ ಹಾಗೂ ಮಹಾಂತೇಶ್ ಎಂಬವರು ದೌರ್ಜನ್ಯ ನಡೆಸಿದ್ದಾರೆ. ಅಷ್ಟೇ ಅಲ್ಲ ಪರಪ್ಪನ ಅಗ್ರಹಾರ ಠಾಣೆಗೆ ಪೊಲೀಸರ ಮೂಲಕ ಕರೆಸಿಕೊಂಡು ಕೆಲಸ ತ್ಯಜಿಸುವಂತೆ ಒತ್ತಡ ಹೇರಿದ್ದಾರೆ. ಕೆಲಸ ತ್ಯಜಿಸದಿದ್ದರೆ ರೌಡಿ ಶೀಟರ್ ಓಪನ್ ಮಾಡುವುದಾಗಿ ಪೊಲೀಸರ ಮೂಲಕ ಬೆದರಿಸಿದ್ದಾರೆ ಎಂದು ಶಿವರಾಜ್ ಕುಮಾರ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜೂನ್ 18ರಂದು ಮತ್ತೊಮ್ಮೆ ಪೊಲೀಸ್ ಠಾಣೆಗೆ ಕರೆಸಿಕೊಂಡ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ನಡೆಸಿ ಬಲವಂತವಾಗಿ ಕೆಲಸಕ್ಕೆ ಹೋಗುವುದಿಲ್ಲ ಎಂದು ಬರೆಸಿಕೊಂಡಿದ್ದಾರೆಂದು ಶಿವಕುಮಾರ್ ಆರೋಪಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.