ನವದೆಹಲಿ: ಐದು ಗ್ಯಾರಂಟಿಗಳ ಜಾರಿ ಮೂಲಕ ಕರ್ನಾಟಕ ಮಾದರಿ ಅಭಿವೃದ್ಧಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಲಿದ್ದು ನಾವು 20-24 ಸೀಟುಗಳಲ್ಲಿ ಜಯಗಳಿಸುವ ಭರವಸೆ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಎಐಸಿಸಿ ಕಚೇರಿಯಲ್ಲಿ ಸತತ ಆರು ಗಂಟೆಗಳ ಕಾಲ ನಡೆದ ನಾಯಕರ ಸಭೆ ಬಳಿಕ ಮಾಧ್ಯಮಗೋಷ್ಢಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ನಮ್ಮ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಇನ್ನಿತರೆ ಎಐಸಿಸಿ ನಾಯಕರ ಜತೆ ಕರ್ನಾಟಕದ 30 ಕ್ಕೂ ಹೆಚ್ಚು ಮಂದಿ ಪಕ್ಷದ ನಾಯಕರುಗಳ ಮತ್ತು ಸಚಿವರ ಸಭೆ ನಡೆದಿದೆ. ಎರಡು ಪ್ರತ್ಯೇಕ ಸಭೆಗಳಲ್ಲಿ ಲೋಕಸಭಾ ಚುನಾವಣೆ ಹಾಗೂ ಐದು ಗ್ಯಾರಂಟಿಗಳ ಯಶಸ್ವಿ ಜಾರಿಯ ಫಲಿತಾಂಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಐದು ಗ್ಯಾರಂಟಿಗಳು ಪ್ರತಿಯೊಬ್ಬ ಫಲಾನುಭವಿಗೆ ತಲುಪಬೇಕು. ಇದರ ಯಶಸ್ಸು ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಬೇಕು ಎನ್ನುವ ಸದಾಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದರು.
ಪಾರ್ಲಿಮೆಂಟ್ ಚುನಾವಣೆಯಲ್ಲಿ 20-24 ಸೀಟು ಗೆಲ್ಲುವ ಭರವಸೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಗ್ಯಾರಂಟಿಗಳ ಸಮರ್ಪಕ ಜಾರಿ ಮತ್ತು ಲೋಕಸಭಾ ಚುನಾವಣೆಯ ಹೊಣೆ ವಹಿಸಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಕೆಲವು ಜಿಲ್ಲೆಗಳ ಜವಾಬ್ದಾರಿಯನ್ನೂ ಸಚಿವರುಗಳಿಗೆ ನೀಡುವ ಕುರಿತು ಚರ್ಚೆ ನಡೆದಿದೆ ಎಂದರು.
लोकसभा चुनाव की तैयारियों को लेकर आज कांग्रेस मुख्यालय में कर्नाटक के वरिष्ठ नेताओं के साथ बैठक हुई।
इस बैठक के बारे में जानकारी देते कर्नाटक के मुख्यमंत्री श्री @siddaramaiah pic.twitter.com/0PvbFaem9V
— Congress (@INCIndia) August 2, 2023
ಗ್ಯಾರಂಟಿ ಯೋಜನೆಗಳ ಜಾರಿಯಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಪ್ರಧಾನಿ ಮೋದಿ ಅವರ ಆರೋಪ ಪೂರ್ತಿ ಸುಳ್ಳಾಗಿದೆ. ನಾವು ಬಜೆಟ್ ನಲ್ಲಿ ಐದು ಗ್ಯಾರಂಟಿಗಳಿಗೆ ಹಣ ಒದಗಿಸುವ ಜತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 76 ಭರವಸೆಗಳಿಗೂ ಹಣ ನೀಡಿದ್ದೇವೆ. ಇವೆಲ್ಲವೂ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರ ಬದುಕಿಗೂ ಸ್ಪಂದಿಸುವ ಯೋಜನೆಗಳಾಗಿವೆ. ಪ್ರತೀ ದಿನ ಒಂದೂವರೆ ಕೋಟಿಗೂ ಅಧಿಕ ಮಂದಿ ನಮ್ಮ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ದೇಶದ ಆರ್ಥಿಕತೆಯನ್ನು ಹಾಳು ಗೆಡವಿದ ಪ್ರಧಾನಿ ಮೋದಿ ಅವರು ಕರ್ನಾಟಕ ಮಾದರಿ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳಲಿ. ದೇಶವನ್ನು ಸರಿ ದಾರಿಯಲ್ಲಿ ಮುನ್ನಡೆಸಲಿ ಎಂದರು.
ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎವೈಸಿಸಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.