ಬೆಂಗಳೂರು: ಕೊರೋನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನರು ದೇವಾಲಯ, ಮಂದಿರಗಳಿಗೆ ಹೋಗುವಂತಿಲ್ಲ. ಇದೇ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ಹೊಸ ಅಭಿಯಾನಕ್ಕೆ ಮುನ್ನುಡಿ ಬರೆದಿವೆ.
ಕೆಲ ದಿನಗಳ ಹಿಂದೆ ಕೊರೋನಾ ವಿರುದ್ದ ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರು. ಅಂದು ದಿನವಿಡೀ ಮನೆಯಲ್ಲೇ ಇದ್ದು, ಸಂಜೆ ಚಪ್ಪಾಳೆ ತಟ್ಟಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಸೇನಾನಿಗಳಿಗೆ ಧನ್ಯವಾದ ಹೇಳುವಂತೆ ಕರೆ ನೀಡಿದ್ದರು. ಅಂದು ದೇಶವ್ಯಾಪಿ ಚಪ್ಪಾಳೆಯ ಸದ್ದಷ್ಟೇ ಅಲ್ಲ, ಹಲವರು ಶಂಖನಾದ, ಘಂಟೆ-ಜಾಗಟೆಗಳನ್ನು ಭಾರಿಸಿ ಹೊಸದೊಂದು ತರಂಗ ಸೃಷ್ಟಿಸಿದ್ದರು.
ಇದೀಗ ರಾಮನವಮಿ ಸರದಿ. ಈ ಬಾರಿಯ ರಾಮನವಮಿಯನ್ನು ಕೊರೋನಾ ಸಂಹಾರಕ್ಕೆ ಮೀಸಲಿಡಲು ಆಸ್ತಿಕ ಸಮುದಾಯ ಸಲಹೆ ಮಾಡಿದೆ. ಹಾಗಾಗಿ ಹಿಂದೂ ಸಂಘಟನೆಗಳು ರಾಮ ನವಮಿಯ ದಿನವಾದ ಗುರುವಾರ ಸಂಜೆ ‘ನವದೀಪ’ ಕೈಂಕರ್ಯ ನೆರವೇರಿಸುವಂತೆ ಕರೆ ನೀಡಿವೆ.
ಶ್ರೀ ರಾಮ ಜಯಂತಿ ನಿಮಿತ್ತ ನಾವೆಲ್ಲ ಸೇರಿ ಭಾರತ ದೇಶದ ದಿಗಂತವನ್ನು ಪ್ರಕಾಶಿಸೋಣ ಎಂಬ ಸಂದೇಶ ಸಾರುತ್ತಿರುವ ಹಿಂದೂ ಕಾರ್ಯಕರ್ತರು, ಏಪ್ರಿಲ್ 2ಎಂದು ಸಂಜೆ 7.30ಕ್ಕೆ ನಮ್ಮ-ನಮ್ಮ ಮನೆ ಮುಂದೆ ಅಥವಾ ನಾವಿರುವ ಸ್ಥಳದಲ್ಲಿ 9 ಸಾಮಾನ್ಯ ರೂಪದ ದೀಪಗಳನ್ನ ಬೆಳಗಿಸೋಣ ಎಂದು ಕರೆ ಕೊಟ್ಟಿದ್ದಾರೆ.
ಕತ್ತಲಾಗುತ್ತಿದ್ದಂತೆಯೇ ದೀಪ ಬೆಳಗಿಸಿ ಅಂದಿನ ರಾತ್ರಿಯನ್ನು ಭಾರತ ದಿನವನ್ನಾಗಿ ಬೆಳಗಿಸೋಣ, ಇಡೀ ವಿಶ್ವಕ್ಕೆ ನಮ್ಮ ಹಿರಿಮೆಯನ್ನ ತಿಳಿಸೋಣ. ಶ್ರೀರಾಮನನ್ನು ಪೂಜಿಸುವ ಜನರು ರಾತ್ರಿಯನ್ನು ಹಗಲನ್ನಾಗಿ ಬದಲಿಸಬಲ್ಲರು ಎಂಬುದನ್ನು ತೋರಿಸೋಣ ಎಂದು ಮನವಿ ಮಾಡಿದ್ದಾರೆ.