ಕರಾವಳಿಯಲ್ಲಿ ಬಂದ್ ಇರಲ್ಲ; ಆದರೆ ರಿಲ್ಯಾಕ್ಸ್ ಮೂಡ್’ನಲ್ಲಿ ಇಲ್ಲವೇ ಇಲ್ಲ

ಮಂಗಳೂರು: ಮಾರಕ ಕೊರೋನಾ ಉಲ್ಬಣಗೊಂಡ ಹಿನ್ನೆಲೆಯಲ್ಲಿ 2 ದಿನಗಳಿಂದ ಬಂದ್ ಆಗಿದ್ದ ಬಂದರು ನಗರಿ ಮಂಗಳೂರು ಬುಧವಾರದಿಂದ ಕೊಂಚ ರಿಲ್ಯಾಕ್ಸ್ ಆಗಲಿದೆ. ಆದರೆ ಜನಜೀವನ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳದು. ಯಾಕೆಂದರೆ ಇನ್ನೂ 2 ವಾರ ಕಾಲ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ದಕ್ಷಿಣಕನ್ನಡದಲ್ಲೂ ಅದು ಇರುತ್ತದೆ. ಹಾಗಾಗಿ ಅಗತ್ಯ ವಸ್ತುಗಳ ಖರೀದಿಗಷ್ಟೇ ಅವಕಾಶ ಇರುತ್ತದೆ.

ಚೀನಾದಲ್ಲಿ ಜನ್ಮ ತಾಳಿ ಜಗತ್ತಿನಾದ್ಯಂತ ಮರಣ ಮೃದಂಗ ಸೃಷ್ಟಿಸಿದ್ದ ಕೊರೋನಾ ವೈರಾಣು ಮಂಗಳೂರಿನಲ್ಲೂ ಕಂಪನ ಉಂಟುಮಾಡಿತ್ತು. ವೆನ್ಲಾಕ್ ಅವಾಂತರ ಸಹಿತ ಕೆಲವು ವಿವಾದಗಳ ಜೊತೆಯಲ್ಲೇ ಆಗಾಗ್ಗೆ ದೃಢಪಟ್ಟ ಕೊರೋನಾ ಸೋಂಕು ಪ್ರಕರಣಗಳಿಂದಾಗಿ ದಕ್ಷಿಣಕನ್ನಡ ಜಿಲ್ಲೆಯ ಅಧಿಕಾರಿಗಳು ಸಹಜವಾಗಿಯೇ ಗಲಿಬಿಲಿಗೊಂಡಿದ್ದರು. ಹಾಗಾಗಿಯೇ ಕೆಲ ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಗೂ ಅವಕಾಶ ಸಿಗದ ರೀತಿಯಲ್ಲಿ ಬಂದ್ ಆಗಿತ್ತು. ಇದೀಗ ಬಂದ್ ರಿಲ್ಯಾಕ್ಸ್ ಆಗಿದ್ದು ಬುಧವಾರದಿಂದ ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅಗತ್ಯ ವಸ್ತುಗಳ ಮಾರಾಟ ಮಳಿಗೆ ತೆರೆಯಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಈ ಕುರಿತು ಮಾಹಿತಿ ನೀಡಿರುವ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬುಧವಾರದಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲಾ ಅಗತ್ಯ ವಸ್ತುಗಳು ಜನಸಾಮಾನ್ಯರಿಗೆ ಲಭ್ಯವಿರಲಿವೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯ ತನಕ ಪ್ರತಿನಿತ್ಯ ಅಗತ್ಯ ಸಾಮಾಗ್ರಿಗಳು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ದಿನಸಿ, ಹಾಲು, ಔಷಧಿ, ಗ್ಯಾಸ್, ಪೆಟ್ರೋಲ್, ಬ್ಯಾಂಕ್ ಸೇರಿದಂತೆ ಅಗತ್ಯ  ಸೇವೆ ಜನರಿಗೆ ಲಭ್ಯವಾಗಲಿದೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ಈ ಕುರಿತಂತೆ ಮಂಗಳೂರು ಸಂಸದರೂ ಆದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡಾ ಟ್ವೀಟ್ ಮಾಡಿದ್ದಾರೆ. ಬಂದ್ ಇಲ್ಲವಾದರೂ ಕೊರೋನಾ ನಿಯಂತ್ರಿಸುವ ಉದ್ದೇಶದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾರಕ ರೋಗ ಹರಡದಂತೆ ಎಚ್ಚರವಹಿಸಬೇಕು ಎಂದು ನಳಿನ್ ಕುಮಾರ್ ಕರೆ ಮನವಿ ಮಾಡಿದ್ದಾರೆ.

Related posts