ಕೊರೋನಾ ನರ್ತನ; ಹೆಚ್ಚುತ್ತಿರುವ ಸೋಂಕಿನಿಂದ ದೇಶದಲ್ಲಿ ತಲ್ಲಣ

ದೆಹಲಿ:ಕೊರೋನಾ ಮಹಾಮಾರಿಯ ಭೀತಿಯಿಂದ ಭಾರತ ನಲುಗಿದ್ದು, ದೇಶ ಇನ್ನೂ 14 ದಿನ ಲಾಕ್ ಡೌನ್ ಪರಿಸ್ಥಿತಿಯನ್ನು ಎದುರಿಸಲೇಬೇಕು. ಎಷ್ಟೇ ನಿಯಂತ್ರಣ ಕ್ರಮ ಅನುಸರಿಸಿದರೂ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವನ್ನಪಿದವರ ಸಂಖ್ಯೆ ಹೆಚ್ಚುತ್ತಲೇ ಇವೆ.
ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬರು ಬಲಿಯಾಗುವುದರೊಂದಿಗೆ ದೇಶದಲ್ಲಿ ವೈರಸ್’ಗೆ ಬಲಿಯಾದವರ ಸಂಖ್ಯೆ 51 ದಾಟಿದೆ.

ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ವರ್ಷದ ಕೊರೋನಾ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಶ್ಚಿಮಬಂಗಾಳ, ಪಂಜಾಬ್ ಹಾಗೂ ಕೇರಳ ರಾಜ್ಯದಲ್ಲಿ ತಲಾ ಒಬ್ಬರು ಮಂಗಳವಾರ ಮೃತಪಟ್ಟಿದ್ದರು. ಅದಾಗಲೇ ದೇಶದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ ೫೦ ತಲುಪಿತ್ತು.

ಇದೇ ವೇಳೆ ಮತ್ತೆ 18 ಮಂದಿಯಲ್ಲಿ ಮತ್ತೆ ಕೊರೋನಾ ವೈರಾಣು ಸೋಂಕು ಪತ್ತೆಯಾಗಿದ್ದು, ಇದೀಗ ಕೊರೋನಾ ಪೀಡಿತರ ಸಂಖ್ಯೆ 1,619ಕ್ಕೆ ಏರಿಕೆಯಾಗಿದೆ.

ದೆಹಲಿಯ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊನಿದ್ದರೆನ್ನಲಾಗಿದ್ದ ಹಲವರಲ್ಲಿ ಕೊರೋನಾ ಸೋಂಕು ಹಬ್ಬಿದ್ದು, ತಮಿಳುನಾಡು ರಾಜ್ಯದಲ್ಲಿ ಮಂಗಳವಾರ ಒಂದೇ ದಿನದಲ್ಲಿ 50 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ತಬ್ಲೀಘಿ ಜಮಾತ್ ಸಂಘಟನೆ ಮಾರ್ಚ್ 1ರಿಂದ 15ರವರೆಗೆ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ 8000ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಅಲ್ಲಿಯೂ ಇನ್ನಷ್ಟು ಜನರಿಗೆ ಸೋಂಕು ಹಬ್ಬಿಸಿರುವ ಭೀತಿ ಕಾಡಿದೆ.

Related posts