ಚಂದ್ರೇಗೌಡರ ನಿಧನಕ್ಕೆ ಕಂಬನಿಯ ಮಹಾಪೂರ, ಜೋಶಿ, ನಳಿನ್ ಸೇರಿ ಗಣ್ಯರ ಕಬನಿ

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಡಿ.ಬಿ.ಚಂದ್ರೇಗೌಡರು ವಿಧಿವಶರಾಗಿದ್ದಾರೆ. ಹಿರಿಯ ನಾಯಕನ ನಿಧನಕ್ಕೆ ನಾಯಕರನೇಕರು ಶೋಕ ವ್ಯಕ್ತಪಡಿಸಿದ್ದಾರೆ.

ಹಿರಿಯ ರಾಜಕಾರಣಿ, ಸಂಸದರಾಗಿ, ಸಚಿವರಾಗಿ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಡಿ.ಬಿ. ಚಂದ್ರೇಗೌಡ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಹಿರಿಯ ರಾಜಕೀಯ ಮುತ್ಸದ್ದಿ ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ ಅವರ ನಿಧನ ಬಗ್ಗೆ ಸಚಿವ ಏನ್. ಎಸ್. ಬೋಸರಾಜ್ ದುಃಖ ವ್ಯಕ್ತಪಡಿಸಿದ್ದಾರೆ. ದೇಶದ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿದ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಶ್ರೀಮತಿ ಇಂದಿರಾ ಗಾಂಧಿ ಅವರಿಗಾಗಿ ಸಂಸತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರಿಗೆ 1978ರಲ್ಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಇದು ಅವರ ರಾಜಕೀಯ ಬದುಕಿನ ಪ್ರಮುಖ ಘಟ್ಟಗಳಲ್ಲಿ ಒಂದಾಗಿತ್ತು. ಡಿಬಿಸಿ ಅವರು ಕಿರಿಯ ರಾಜಕಾರಣಿಗಳಿಗೆ ಸದಾ ಮಾದರಿ ಎಂದವರು ಹೇಳಿದ್ದಾರೆ.

ರಾಜಕಾರಣದಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ. ಚಂದ್ರೇಗೌಡ ನಮ್ಮನ್ನ ಅಗಲಿರುವುದು ನೋವಿನ ಸಂಗತಿ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಚಂದ್ರೇಗೌಡರು ನನ್ನ ನೆರೆ ಮನೆಯಲ್ಲಿಯೇ‌ ಇದ್ದು ನನಗೆ ಅತ್ಯಂತ ಆತ್ಮೀಯರಾಗಿದ್ದರು ಎಂದಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ,
ಕಳೆದ ತಿಂಗಳು ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದೆ, ಈಗ ಅವರು ನಮ್ಮನ್ನು ಅಗಲಿರುವುದು ಮನೆಯ ಹಿರಿಯರೊಬ್ಬರನ್ನು ಕಳೆದುಕೊಂಡಂತೆ ಆಗುತ್ತಿದೆ. ಚಂದ್ರೇಗೌಡರ ಅಗಲಿಕೆಯಿಂದ ರಾಜ್ಯ ಒಬ್ಬ ಪ್ರಾಮಾಣಿಕ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ಹಂಚಿಕೊಂಡಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿದ್ದ ಹಿರಿಯ ರಾಜಕಾರಣಿ, ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ವಿಧಾನಸಭೆಯ ಮಾಜಿ ಅಧ್ಯಕ್ಷರಾಗಿದ್ದ ಡಿ.ಬಿ. ಚಂದ್ರೇಗೌಡ ಅವರು ದೈವಾಧೀನರಾದ ಸುದ್ದಿ ತಿಳಿದು ಅಪಾರ ದುಃಖವಾಯಿತು. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿ ವರ್ಗಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಕರುಣಿಸಲೆಂದು ಶಾಸಕ ಬಿ.ವೈ.ವಿಜಯೇಂದ್ರ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

Related posts