ಅರಣ್ಯ ಅನುಮತಿಯಿಲ್ಲದೆ ಬಳ್ಳಾರಿ ನಾಲಾ ಯೋಜನೆಗೆ ₹400 ಕೋಟಿ ವೆಚ್ಚ: ಅಧಿಕಾರಿಗಳ ವಿರುದ್ಧ ಚಲುವರಾಯಸ್ವಾಮಿ ಆಕ್ರೋಶ

ಬೆಳಗಾವಿ: ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಬಳ್ಳಾರಿ ನಾಲಾ ಯೋಜನೆಗೆ ಸಂಬಂಧಿಸಿದಂತೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿರುವುದಕ್ಕೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ವ್ಯಾಪ್ತಿಯ ಪ್ರಮುಖ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಸೋಮವಾರ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 20 ವರ್ಷಗಳಿಂದ ಬಳ್ಳಾರಿ ನಾಲಾ ಯೋಜನೆ ಪೂರ್ಣಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

“ಅರಣ್ಯ ಇಲಾಖೆಯ ಅನುಮತಿಯೇ ಇಲ್ಲದೆ ₹400 ಕೋಟಿ ಖರ್ಚು ಮಾಡಿ ಸಾಧಿಸಿದ್ದೇನು? ಡ್ಯಾಂ ಇಲ್ಲದೆ ಕಾಲುವೆಗಳನ್ನು ನಿರ್ಮಿಸಿ ಏನು ಪ್ರಯೋಜನ? ಸಾರ್ವಜನಿಕ ಹಣದ ದುಂದುವೆಚ್ಚಕ್ಕೆ ಕುಮ್ಮಕ್ಕು ನೀಡುತ್ತಿರುವವರು ಯಾರು?” ಎಂದು ಪ್ರಶ್ನಿಸಿದರು.

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಡ್ಯಾಂ ನಿರ್ಮಾಣ ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಕಾಮಗಾರಿ ಕೈಗೆತ್ತಿಕೊಂಡಿರುವುದೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಸಾರ್ವಜನಿಕ ಹಣವನ್ನು ಜವಾಬ್ದಾರಿಯಿಂದ ಬಳಸಬೇಕು ಎಂದು ಎಚ್ಚರಿಸಿದರು.

ಸರ್ಕಾರಿ ಅಧಿಕಾರಿಗಳು ಮಾಡುವ ಕೆಲಸ ಜನರಿಗೆ ಅನುಕೂಲವಾಗಬೇಕು. ಮುಂದಿನ ದಿನಗಳಲ್ಲಿ ಯಾರೇ ಸಚಿವರಾಗಿದ್ದರೂ ತಮ್ಮ ಕೆಲಸ ಸಾರ್ಥಕವೆನಿಸುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಬಳ್ಳಾರಿ ನಾಲಾ ಯೋಜನಾ ವೆಚ್ಚ ₹635 ಕೋಟಿಗೆ ಏರಿಕೆ

2005ರಲ್ಲಿ ₹135 ಕೋಟಿ ಅಂದಾಜು ವೆಚ್ಚ ಹೊಂದಿದ್ದ ಬಳ್ಳಾರಿ ನಾಲಾ ಯೋಜನೆಯ ವೆಚ್ಚ ಈಗ ₹635 ಕೋಟಿಗೆ ಏರಿಕೆಯಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಯೋಜನಾ ವೆಚ್ಚದ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ನಿಗಮದ ಮಂಡಳಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು. ಅರಣ್ಯ ಇಲಾಖೆಯ ಅನುಮತಿ ಪಡೆದ ಬಳಿಕವೇ ಟೆಂಡರ್ ಪ್ರಕ್ರಿಯೆ ಮುಂದುವರಿಸಬೇಕು ಎಂದು ಸಚಿವರು ಸೂಚಿಸಿದರು.

ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಗುರುತಿಸಿರುವ ಜಮೀನನ್ನು ಅರಣ್ಯ ಇಲಾಖೆಗೆ ತಕ್ಷಣ ಹಸ್ತಾಂತರಿಸುವಂತೆಯೂ ನಿರ್ದೇಶನ ನೀಡಿದರು. ಹಿಡಕಲ್ ಡ್ಯಾಂನ ಎಡ ಮತ್ತು ಬಲದಂಡೆಗಳ ವಿವರ, ಅಚ್ಚುಕಟ್ಟು ಪ್ರದೇಶದ ಮಾಹಿತಿ ಹಾಗೂ ಬಳ್ಳಾರಿ ನಾಲಾ ಯೋಜನೆಯ ಸಂಕ್ಷಿಪ್ತ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಿಡಕಲ್ ಡ್ಯಾಂ ಆಧುನೀಕರಣಕ್ಕೆ ₹3,650 ಕೋಟಿ ಡಿಪಿಆರ್

ಹಿಡಕಲ್ ಡ್ಯಾಂ ವ್ಯಾಪ್ತಿಯ ಕಾಲುವೆಗಳ ದುರಸ್ತಿ, ನೀರಿನ ಸೋರಿಕೆ ತಡೆ ಮತ್ತು ಆಧುನೀಕರಣ ಕಾಮಗಾರಿಗಳಿಗಾಗಿ ₹3,650 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಯೋಜನೆ ಪೂರ್ಣಗೊಂಡರೆ ಎಡದಂಡೆ ವ್ಯಾಪ್ತಿಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.

ಮಾರ್ಕಂಡೇಯ ಡ್ಯಾಂ ಬಲವರ್ಧನೆಗೆ ಸೂಚನೆ

ಮಾರ್ಕಂಡೇಯ ಡ್ಯಾಂನ ಗ್ಯಾಲರಿ ತುಂಬಿರುವ ಹಿನ್ನೆಲೆಯಲ್ಲಿ ಜಲಾಶಯದ ಬಲವರ್ಧನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸಚಿವರು ಸೂಚಿಸಿದರು. ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ₹92 ಕೋಟಿ ಅನುದಾನ ಬಿಡುಗಡೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಜಲಾಶಯದ ಸೋರಿಕೆ ತಡೆಯಲು ತಜ್ಞರ ಸಲಹೆ ಪಡೆಯಬೇಕು. ವಿತರಣಾ ಕಾಲುವೆಗಳ ನಿರ್ಮಾಣ ಪೂರ್ಣಗೊಳಿಸದೆ ಜಲಾಶಯದಿಂದ ರೈತರಿಗೆ ಪ್ರಯೋಜನವಾಗುವುದಿಲ್ಲ. ಹೀಗಾಗಿ ಕಾಲುವೆಗಳ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ಉತ್ತರ ವಲಯದ ಮಾರ್ಕಂಡೇಯ, ಹಿಡಕಲ್ ಮತ್ತು ಬಳ್ಳಾರಿ ನಾಲಾ ಸೇರಿದಂತೆ ಐದು ಪ್ರಮುಖ ಯೋಜನೆಗಳ ಸಮಗ್ರ ಮಾಹಿತಿಯನ್ನು ಸಂಜೆಯೊಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಹಾರಾಷ್ಟ್ರದಿಂದ ನೀರು ಪಡೆಯಲು ಮಾತುಕತೆ

ಮಹಾರಾಷ್ಟ್ರ ಸರ್ಕಾರವು ಜೂನ್‌ನಿಂದ ಅಕ್ಟೋಬರ್‌ವರೆಗೆ ನದಿ ನೀರನ್ನು ಎತ್ತಿ ಬೇರೆಡೆಗೆ ತಿರುಗಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

ರಾಜ್ಯದ ರೈತರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಮೂಲಕ ಮಹಾರಾಷ್ಟ್ರದ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ, ಕರ್ನಾಟಕಕ್ಕೆ ಅನುಕೂಲವಾಗುವಂತೆ ಮನವಿ ಸಲ್ಲಿಸಲಾಗುವುದು ಎಂದರು.

ಸಮಗ್ರ ನೀರಾವರಿ ಕಾಯ್ದೆ ರೂಪಿಸಲು ಚಿಂತನೆ

ನೀರಾವರಿ ಯೋಜನೆಗಳ ಸೂಕ್ತ ನಿರ್ವಹಣೆ ಹಾಗೂ ಕಾಲುವೆಗಳಿಂದ ಅನಧಿಕೃತವಾಗಿ ನೀರು ಪಂಪ್ ಮಾಡುವುದನ್ನು ತಡೆಯಲು ಸಮಗ್ರ ನೀರಾವರಿ ಕಾಯ್ದೆ ರೂಪಿಸಿ ಶೀಘ್ರ ಅನುಷ್ಠಾನಗೊಳಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಹಿಪ್ಪರಗಿ, ಘಟಪ್ರಭಾ, ದೂಧ್‌ಗಂಗಾ ಸೇರಿದಂತೆ ಉತ್ತರ ವಲಯದ ಒಟ್ಟು 17 ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲಿಸಲಾಯಿತು. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಥೋಡ್, ವಲಯದ ಮುಖ್ಯ ಎಂಜಿನಿಯರ್‌ಗಳು ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related posts