ಖರ್ಗೆ ಹೇಳಿಕೆ ಕಾಂಗ್ರೆಸ್‌ನ ಹತಾಶೆಯ ಪ್ರತೀಕ: ಡಾ. ರವಿ ಸಿ.ಟಿ.

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯವರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಕಾಂಗ್ರೆಸ್‌ನ ಹತಾಶೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಟೀಕಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ‘ಮೊಹಬ್ಬತ್ ಕಿ ದುಕಾನ್’ ಪರಿಕಲ್ಪನೆಯಲ್ಲಿ ಪ್ರಧಾನಿಯವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಗೆ ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ನ ಕೃಪೆಯಿಂದ ಅಧಿಕಾರಕ್ಕೆ ಬಂದಿಲ್ಲ. ದೇಶದ ಜನರ ವಿಶ್ವಾಸ ಗಳಿಸಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಅಧಿಕಾರಕ್ಕೆ ತರುತ್ತಾರೆ ಮತ್ತು ಜನರೇ ತೀರ್ಮಾನಿಸುತ್ತಾರೆ ಎಂದರು.

ಚುನಾವಣಾ ಸೋಲುಗಳಿಂದ ಹತಾಶೆಗೊಂಡಿರುವ ಕಾಂಗ್ರೆಸ್ ರಾಜಕೀಯ ವಿರೋಧಿಗಳ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ ಅವರು, ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸುವ ಮೂಲಕವೇ ಅಧಿಕಾರ ಪಡೆಯಬೇಕು. ಬೀದಿ ಸಂಘರ್ಷದಿಂದ ಚುನಾಯಿತ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ಟಿಂಗ್ ಪ್ರಕರಣದ ಹಿಂದೆ ಇರುವವರ ತನಿಖೆಯಾಗಲಿ

ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರವಿ ಸಿ.ಟಿ., ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವುದಷ್ಟೇ ಸಾಕಾಗುವುದಿಲ್ಲ. ಅದನ್ನು ಮಾಡಿಸಿದವರು ಯಾರು ಎಂಬುದನ್ನೂ ತನಿಖೆ ನಡೆಸಿ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು. ಪ್ರಕರಣದ ತನಿಖೆಯನ್ನು ಪೊಲೀಸರು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದರು.

ಮೈಸೂರು ರಾಜಮನೆತನದ ಕೊಡುಗೆ ಮರೆಯಬಾರದು

ಮೈಸೂರು ರಾಜಮನೆತನದ ಕುರಿತು ಮಾತನಾಡಿದ ಅವರು, ರಾಜಮನೆತನದ ವಂಶಸ್ಥರ ಬಗ್ಗೆ ರಾಜ್ಯದ ಜನರಿಗೆ ವಿಶೇಷ ಗೌರವ ಮತ್ತು ಅಭಿಮಾನವಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ರಾಜ್ಯದ ಅಭಿವೃದ್ಧಿಗೆ ದೂರದೃಷ್ಟಿಯ ಕೊಡುಗೆ ನೀಡಿದ್ದಾರೆ. ಕನ್ನಂಬಾಡಿ ಅಣೆಕಟ್ಟಿನ ನಿರ್ಮಾಣಕ್ಕೆ ತಮ್ಮ ಮನೆಯ ಚಿನ್ನವನ್ನು ನೀಡಿದ ಇತಿಹಾಸವೂ ರಾಜಪರಿವಾರಕ್ಕಿದೆ ಎಂದು ಹೇಳಿದರು.

ಜಯಚಾಮರಾಜೇಂದ್ರ ಒಡೆಯರು ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಇತರ ಸಂಸ್ಥಾನಗಳೊಂದಿಗೆ ಸಂಪರ್ಕ ಸಾಧಿಸಲು ತಮ್ಮ ಖಾಸಗಿ ವಿಮಾನವನ್ನು ಬಳಸಿಕೊಳ್ಳಲು ನೀಡಿದ್ದನ್ನು ಉಲ್ಲೇಖಿಸಿದ ಅವರು, ರಾಜಮನೆತನದ ಐತಿಹಾಸಿಕ ಕೊಡುಗೆಗಳನ್ನು ಮರೆಯಬಾರದು ಎಂದರು.

ಸಂಸ್ಥಾನಗಳ ಭಾರತ ವಿಲೀನದ ಸಂದರ್ಭದಲ್ಲಿ ರಾಜಪರಿವಾರಗಳ ಗೌರವ, ಆಸ್ತಿ ಮತ್ತು ಖಾಸಗಿ ಭತ್ಯೆಗಳಿಗೆ ಸಂಬಂಧಿಸಿದ ಒಪ್ಪಂದಗಳಿದ್ದವು ಎಂದು ತಿಳಿಸಿದ ಅವರು, ಅಧಿಕಾರವಿದೆ ಎಂಬ ಕಾರಣಕ್ಕೆ ಮನಬಂದಂತೆ ವರ್ತಿಸಬಾರದು ಎಂದು ಎಚ್ಚರಿಸಿದರು.

ರಾಜಮನೆತನದ ಕುರಿತು ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ರವಿ ಸಿ.ಟಿ., ಇತಿಹಾಸದ ಹಿನ್ನೆಲೆಯನ್ನು ಅರಿತುಕೊಂಡು ಮಾತನಾಡಬೇಕು. ರಾಜಪರಿವಾರದ ವಿಚಾರಗಳನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕೇ ಹೊರತು, ಅಧಿಕಾರದ ಅಹಂಕಾರದಿಂದ ವರ್ತಿಸಬಾರದು ಎಂದು ಹೇಳಿದರು.

Related posts