ದೇಶಾದ್ಯಂತ ಕೊರೋನಾ ವೈರಾಣು ಮರಣ ಕಥೆಯನ್ನೇ ಸಾರುತ್ತಿದೆ. ಇತ್ತ ಬೆಂಗಳೂರಿನಲ್ಲೂ 70ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆದರೆ ಸೋಂಕಿತರು ಹೊರಗಿನಿಂದ ಬಂದವರೇ ಹೆಚ್ಚು ಮಂದಿ..
ಬೆಂಗಳೂರು: ಕೊರೋನಾ ತಾಂಡವವಾಡುತ್ತಿದ್ದು ರಾಜಧಾನಿ ಬೆಂಗಳೂರಿನಲ್ಲೂ ಸುಮಾರು 72 ಮಂದಿ ಕೋವಿಡ್-19 ಸೋಂಕಿತರಿದ್ದಾರೆ. ಶನಿವಾರ ಮತ್ತೆ 7 ಮಂದಿಯಲ್ಲಿ ಕೊರೋನಾ ಸೋಂಕು ಇರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಇದೇ ವೇಳೆ ಬೆಂಗಳೂರಿನಲ್ಲಿನ ವೈರಾಣು ಕಥಾನಕವನ್ನು ಕೆದಕಿದಾಗ ಇಲ್ಲಿ ಸೋಂಕು ಪತ್ತೆಯಾಗಿರುವುದು ವಿದೇಶದಿಂದ ಆಗಮಿಸಿದವರಲ್ಲಿ ಹಾಗೂ ಅವರ ಸಂಪರ್ಕದಲ್ಲಿದ್ದವರಲ್ಲೇ ಹೆಚ್ಚು. ಜೊತೆಗೆ ದೆಹಲಿವ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡವರು. ಅದನ್ನು ಹೊರತಾಗಿ ಒಬ್ಬರಿಂದ ಮತ್ತೊಬ್ಬರಿಗೆ ಎಲ್ಲೆಂದರಲ್ಲಿ ಹರಡಿರುವ ಸಾಧ್ಯತೆಗಳೇ ಇಲ್ಲ.
ರಾಜಧಾನಿಯಲ್ಲಿ ಕೊರೋನಾ ಸೋಂಕು ಹರಡದಂತೆ ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ನಿಯಮ ಮೀರಿ ಸಂಚರಿಸುವವರ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗಿದೆ.
ಈ ನಡುವೆ, ಬೆಂಗಳೂರಿನಲ್ಲಿರುವ ಕೊರೋನಾ ಸೋಂಕಿತರ ಪೈಕಿ ವಿದೇಶದಿಂದ ಬಂದವರೇ ಹೆಚ್ಚು ಮಂದಿ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಬಿಬಿಎಂಪಿ ವಾರ್ಡ್ ಮಟ್ಟದಲ್ಲಿ ವರದಿ ಸಂಗ್ರಹಿಸಿ ಮಾಹಿತಿ ಕ್ರೋಡೀಕರಿಸಿ ವರದಿಯೊಂದನ್ನು ಸಿದ್ದಪಡಿಸಲಾಗಿದೆ.
ರೋಪ್, ಅಮೆರಿಕಾ, ಜರ್ಮನಿ, ದುಬೈ ಹಾಗೂ ಸ್ಪೇನ್ ದೇಶಗಳಿಂದ ಆಗಮಿಸಿರುವವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತು. ಅನಂತರ ಅವರ ಸಂಪರ್ಕದಲ್ಲಿದ್ದವರಿಗೆ ವೈರಾಣು ಹರಡಿದೆ. ಒಂದು ಅಂಕಿ ಅಂಶ ಪ್ರಕಾರ ವಿದೇಶದಿಂದ ಬಂದ 46 ಮಂದಿ ಸೋಂಕಿತರಿದ್ದಾರೆ. ಅಮೆರಿಕಾದಿಂದ ಬಂದ 9 ಮಂದಿಯಲ್ಲಿ, ಲಂಡನ್ ಹಾಗೂ ದುಬೈನಿಂದ ಬಂದ ತಲಾ 8 ಮಂದಿಯಲ್ಲಿ ಜರ್ಮನಿಯಿಂದ ಬಂದ ಐವರಲ್ಲಿ ಸೋಂಕು ಪತ್ತೆಯಾಗಿತ್ತು. ಸ್ಪೇನ್’ನಿಂದ ಬಂದ ನಾಲ್ವರು ಕೊರೋನಾ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ದೆಹಲಿಯ ಸಭೆಯಲ್ಲಿ ಪಾಲ್ಗೊಂಡು ಬಂದು ಸೋಂಕಿತರಾಗಿರುವವರ ಸಂಖ್ಯೆಯೂ ದೊಡ್ಡದಿದೆ ಎಂದು ಹೇಳಲಾಗುತ್ತಿದೆ.