ಮಂಗಳೂರು: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಪರಿಣಾಮವಾಗಿ ಇಂದು ದೇಶಾದ್ಯಂತ ವಿದ್ಯಾರ್ಥಿಗಳು ರಸ್ತೆಗಿಳಿಯುವಂತಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ತೀವ್ರವಾಗಿ ಕಿಡಿಕಾರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜತೆ ನಡೆದುಕೊಂಡ ರೀತಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆಯನ್ನು ಶಿಕ್ಷಣ ಸಚಿವರೇ ಹೊರಬೇಕಿದೆ ಎಂದ ಪದ್ಮರಾಜ್, ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಜಗತ್ತೇ ನೋಡಿದೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದ ಅಮೃತಸರ ಹತ್ಯಾಕಾಂಡವನ್ನು ನೆನಪಿಸುವ ರೀತಿಯಲ್ಲಿ ಬಿಜೆಪಿ ಗೂಂಡಾಗಳನ್ನು ಬಳಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2014ರಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ರಚನೆಯಾದ ಎನ್ಟಿಎ (ರಾಷ್ಟ್ರೀಯ ಪರೀಕ್ಷಾ ಮಂಡಳಿ) ಮೂಲಕ ಇದುವರೆಗೆ 152 ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ನೀಟ್ ಪತ್ರಿಕೆ ಸೋರಿಕೆಯಿಂದಾಗಿ ಇದುವರೆಗೆ 22 ಮಂದಿ ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದು, ಇದು ಸರ್ಕಾರದ ವೈಫಲ್ಯದ ಫಲ ಹಾಗೂ ಕೊಲೆಗೆ ಸಮಾನವಾಗಿದೆ ಎಂದರು.
ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದೆ ವಿದೇಶಿ ಹಣ ಹಾಗೂ ಭಯೋತ್ಪಾದಕರಿದ್ದಾರೆ ಎಂದು ಹಗುರವಾಗಿ ಮಾತನಾಡುವ ಸರ್ಕಾರಕ್ಕೆ ಈ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದೆಯೇ? ವರದಿ ಮಾಹಿತಿ ನೀಡಿದ್ದರೆ ಅದನ್ನು ತಡೆಯುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕೆ ಇರಲಿಲ್ಲವೇ? ಕೇಂದ್ರ ಸರ್ಕಾರ ಅಷ್ಟೊಂದು ಅಸಮರ್ಥವಾಯಿತೇ ಎಂದು ಪದ್ಮರಾಜ್ ಪ್ರಶ್ನಿಸಿದರು. ‘ಬೇಟಿ ಬಚಾವೋ, ಬೇಟಿ ಪಡಾವೋ’ ಎನ್ನುವವರ ಆಡಳಿತದಲ್ಲಿ ವಿದ್ಯಾರ್ಥಿನಿಯರ ಬಟ್ಟೆಗಳನ್ನು ಹರಿದು ಹಲ್ಲೆ ನಡೆಸಿರುವುದು ಸಾಮಾಜಿಕ ಜಾಲತಾಣಗಳ ದೃಶ್ಯಗಳಿಂದ ಸ್ಪಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಎಂದಿಗೂ ರಾಜಕೀಯದ ಬಲಿಪಶುವಾಗಬಾರದು ಎಂದು ಕಿವಿಮಾತು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಪ್ಪಿ, ಟಿ.ಕೆ. ಸುಧೀರ್, ಜಯಶೀಲ ಅಡ್ಯಾಂತಾಯ, ಪ್ರೇಮನಾಥ್ ಹಾಗೂ ಸಮರ್ಥ್ ಭಟ್ ಉಪಸ್ಥಿತರಿದ್ದರು.

