ಕೇಂದ್ರ ಸಚಿವ ಸ್ಥಾನಕ್ಕೆ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ; ರಾಷ್ಟ್ರಪತಿಯಿಂದ ಅಂಗೀಕಾರ

ನವದೆಹಲಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಶುಕ್ರವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೀನಾಮೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ.

ರಾಷ್ಟ್ರಪತಿ ಭವನ ಹೊರಡಿಸಿದ ಪ್ರಕಟಣೆಯಲ್ಲಿ, ಸಂವಿಧಾನದ 75ನೇ ವಿಧಿ ಅನ್ವಯ ರವನೀತ್ ಸಿಂಗ್ ಬಿಟ್ಟು ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಲಾಗಿದೆ.

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗನಾದ ಬಿಟ್ಟು, 2024ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಳಿಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅವರು, ನಂತರ ರಾಜಸ್ಥಾನದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ರಾಜ್ಯಸಭಾ ಅವಧಿ ಜೂನ್ 21ರಂದು ಅಂತ್ಯಗೊಂಡಿದ್ದು, ಸಂವಿಧಾನದ ನಿಯಮದಂತೆ ಆರು ತಿಂಗಳವರೆಗೆ ಸಚಿವರಾಗಿ ಮುಂದುವರಿದಿದ್ದರು.

ಬಿಜೆಪಿ ಮೂಲಗಳ ಪ್ರಕಾರ, ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆ ಮೇಲೆ ಗಮನಹರಿಸುವ ಉದ್ದೇಶದಿಂದ ಬಿಟ್ಟು ಸಚಿವ ಸ್ಥಾನ ತೊರೆದಿದ್ದಾರೆ. ಆಮ್ ಆದ್ಮಿ ಪಕ್ಷ ಆಡಳಿತದ ಪಂಜಾಬ್‌ನಲ್ಲಿ ಬಿಜೆಪಿಯ ಸಂಘಟನೆ ಬಲಪಡಿಸುವ ಹೊಣೆಗಾರಿಕೆಯನ್ನು ಅವರು ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Related posts