ಬೆಂಗಳೂರು: ವಯೋವೃದ್ಧನಿಗೆ ಸೇರಿದ್ದೆನ್ನಲಾದ ಆಸ್ತಿಯನ್ನು ಖಾಸಗಿ ಸಂಸ್ಥೆಗಳ ಗೂಂಡಾಗಳು ಅತಿಕ್ರಮಿಸಲು ಯತ್ನಿಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲು ಯಲಹಂಕ ಠಾಣೆ ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದರಿಂದ ನೊಂದ ವೃದ್ಧ FIR ದಾಖಲಿಸಲು ನಿರ್ದೇಶನ ಕೋರಿ ಬೆಂಗಳೂರು ಪೊಲೀಸ್ ಕಮೀಷನರ್’ಗೆ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನ ಆಡುಗೋಡಿ ನಿವಾಸಿ 70 ವರ್ಷ ಪ್ರಾಯದ ಅಬ್ದುಲ್ ಸತ್ತಾರ್, ಎಂಬವರು ತಮಗೆ ಸೇರಿದ್ದೆನ್ನಲಾದ ಯಲಹಂಕದ ಸರ್ವೇ ನಂಬರ್ 29/3ರ 7 ಗುಂಟೆ ನಿವೇಶನವನ್ನು ಕೆಲವು ವ್ಯಕ್ತಿಗಳು ಅತಿಕ್ರಮಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಆದರೂ ಏಪ್ರಿಲ್ 8 ರಂದು ಮಧ್ಯಾಹ್ನ 25 ಕ್ಕೂ ಹೆಚ್ಚು ಮಂದಿ ಸದರಿ ಸ್ಥಳಕ್ಕೆ ಬಂದು ‘ತಾವು Mac Charles Hob Projects Pvt Ltd ಮತ್ತು Embassy ಕಂಪನಿ ಕಡೆಯವರು ಈ ನಿವೇಶನಕ್ಕೆ ತೆರಳಿ ಈ ಸ್ವತ್ತನ್ನು ತಮಗೆ ಬಿಟ್ಟುಕೊಟ್ಟು ಸ್ಥಳದಿಂದ ತೆರಳಬೇಕು’ ಎಂದು ಅಬ್ದುಲ್ ಸತ್ತಾರ್ ಆರೋಪಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಆ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅದೇ ದಿನ ಯಲಹಂಕ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದು, ಈ ಬಗ್ಗೆ ಪೊಲೀಸರು FIR ದಾಖಲಿಸುವ ಬದಲು NCR ದಾಖಲಿಸಿದ್ದಾರೆ ಎಂದು ಅಬ್ದುಲ್ ಸತ್ತಾರ್ ಆರೋಪಿಸಿದ್ದಾರೆ.
ಇದನ್ನೇ ಅವಕಾಶ ಎಂಬಂತೆ ಬೆಳಸಿಕೊಂಡು, Embassy developers ಕಡೆಯವರು ಎಂದು ಹೇಳಿಕೊಂಡ ಯುವಕರ ಗುಂಪು, 09.04.2026ರಂದು ಮದ್ಯಾಹ್ನ ಮತ್ತೆ ಸ್ಥಳಕ್ಕೆ ಬಂದು ತನ್ನನ್ನು ಬೆದರಿಸಿದ್ದಾರೆ ಎಂದು ವೃದ್ಧ ಅಬ್ದುಲ್ ಸತ್ತಾರ್ ದೂರಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಅಸ್ತಿ ವಿವಾದವು ನ್ಯಾಯಾಲಯದಲ್ಲಿ ಇರುವುದರಿಂದ ಯಾರೂ ಕೂಡಾ ಸ್ಥಳಕ್ಕೆ ತೆರಳ ಬಾರದೆಂದು ಎಚ್ಚರಿಕೆ ನೀಡಿದ್ದಾರೆ. ಆದರೆ, ಸದರಿ ಸ್ಥಳದಲ್ಲಿ Embassy ಕಡೆಯವರು ಅನಧಿಕೃತವಾಗಿ ಕೆಲಸ ಮಾಡಲು ಪೊಲೀಸರೇ ಬೆಂಗಾವಲಾಗಿ ನಿಂತಿದ್ದಾರೆ ಎಂದು ಅಬ್ದುಲ್ ಸತ್ತಾರ್ ಅವರು ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಅಬ್ದುಲ್ ಸತ್ತಾರ್ ಅವರು ಯಲಹಂಕದಲ್ಲಿರುವ ಸರ್ವೇ ನಂಬರ್ 11/7ರ ನಿವೇಶನವನ್ನು 26.07.2012ರಂದು ಶ್ರೀಧರ ರೆಡ್ಡಿ ಎಂಬವರಿಗೆ ಜೊತೆ ಜಂಟಿ ಸಹಭಾಗಿತ್ವದಲ್ಲಿ ವಸತಿ ಯೋಜನೆಗಾಗಿ 25 ಲಕ್ಷ ರೂಪಾಯಿ ಮೊತ್ತಕ್ಕೆ ಒಪ್ಪಂದ ಮಾಡಿದ್ದರು. ಈ ಯೋಜನೆಯು ಜಾರಿಯಾಗದ ಹಿನ್ನೆಲೆ, ನಷ್ಟ ಪರಿಹಾರ ಕೋರಿ ಶ್ರೀಧರ ರೆಡ್ಡಿಯವರು 2018ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ದಾವೆಯು ಏಕಪಕ್ಷೀಯವಾಗಿ ತೀರ್ಮಾನಿಸಲ್ಪಟ್ಟು 85 ಲಕ್ಷ ರೂಪಾಯಿ ಮರುಪಾವತಿಸಬೇಕೆಂದು ಕೋರ್ಟ್ ಆದೇಶವಾಗಿದೆ. ಈ ಪರಿಹಾರ ಮೊತ್ತದ ವಸೂಲಿಗಾಗಿ ಸರ್ವೇ ನಂಬರ್ 11/7ರ ನಿವೇಶನವನ್ನು ಹರಾಜು ಮಾಡುವ ಬದಲು, ಪ್ರಕರಣಕ್ಕೆ ಸಂಬಂಧವೇ ಇಲ್ಲದ ತಮ್ಮ ಒಡೆತನದ ಸರ್ವೇ ನಂಬರ್ 29/3 ಆಸ್ತಿಯನ್ನು 2,40,10,000 ರೂಪಾಯಿ ಮೊತ್ತಕ್ಕೆ ದಯಾಕರ್ ರೆಡ್ಡಿ ಎಂಬವರಿಗೆ ಹರಾಜು ಮಾರಾಟ ನಡೆಸಲಾಗಿದೆ ಎಂದು ಅಬ್ದುಲ್ ಸತ್ತಾರ್ ದೂರಿದ್ದಾರೆ. ಈ ಹರಾಜು ಪ್ರಕ್ರಿಯೆಯು ಕೋವಿಡ್ ಅವಧಿಯಲ್ಲೇ ನಡೆದಿದ್ದು, ಈ ವಿಚಾರ ತಡವಾಗಿ ತಮ್ಮ ಗಮನಕ್ಕೆ ಬಂದಿರುತ್ತದೆ ಎಂದು ಅಬ್ದುಲ್ ಸತ್ತಾರ್ ಅವರು ಪೊಲೀಸ್ ಆಯುಕ್ತರ ಗಮನಸೆಳೆದಿದ್ದಾರೆ.
ಹರಾಜು ಮಾಡಲಾಗಿರುವ ಸರ್ವೇ ನಂಬರ್ 29/3 ಆಸ್ತಿಯನ್ನು ಅಬ್ದುಲ್ ಸತ್ತಾರ್ ಅವರು 2019ರಲ್ಲೇ ಆದಿ ಡೆವೆಲಪರ್ ಸಂಸ್ಥೆಗೆ ಜಂಟಿ ಸಹಭಾಗಿತ್ವದ ಯೋಜನೆಗಾಗಿ 50 ಲಕ್ಷ ರೂಪಾಯಿ ಮೊತ್ತಕ್ಕೆ ಒಪ್ಪಂದ ಮಾಡಿರುತ್ತಾರೆ. ಹಾಗಾಗಿ ಅದಿ ಡೆವೆಲೋಪರ್ ಮಾಲೀಕರು ಈ ಹರಾಜು ಮಾರಾಟಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರಾದರೂ ಅನಂತರದಲ್ಲಿ ಅವರು ತಮ್ಮ ಎದುರು ಪಕ್ಷದವರಿಂದ 50 ಲಕ್ಷ ರೂಪಾಯಿ ಮೊತ್ತವನ್ನು ಪಡೆದು, ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಈ ವಿಚಾರವನ್ನು ಶ್ರೀಧರ ರೆಡ್ಡಿ, ಆದಿ ರೆಡ್ಡಿ ಹಾಗೂ ದಾಯಕರ ರೆಡ್ಡಿಯವರು ಸಲ್ಲಿಸಿರುವ ಜಂಟಿ ಉಲ್ಲೇಖಿಸಿದ್ದಾರೆ ಎಂದು ಅಬ್ದುಲ್ ಸತ್ತಾರ್ ಆರೋಪಿಸಿದ್ದಾರೆ.
ಕೋವಿಡ್ ಸಮಯದಲ್ಲಿ ನಡೆದ ಹರಾಜಿನಲ್ಲಿ ತೀರಾ ಕಡಿಮೆ 2,40,10,000 ರೂಪಾಯಿ ಮೊತ್ತಕ್ಕೆ ದಾಯಕರ ರೆಡ್ಡಿ ಖರೀದಿಸಿದ ಈ ಅಸ್ತಿಯು 2022ರಲ್ಲಿ Mac Charles Hob Projects Pvt Ltd ಸಂಸ್ಥೆಗೆ 5,36,07,000 ರೂಪಾಯಿ ಮೌಲ್ಯಕ್ಕೆ ಪರಭಾರೆಯಾಗಿದೆ. Embassy Groopಗೆ ಸೇರಿದ ಈ ಸಂಸ್ಥೆಯು 2023ರಲ್ಲಿ ಅದೇ ಆಸ್ತಿಯನ್ನು 32 ಕೋಟಿಗೆ Catalyst Trustship Pvt Ltd ಸಂಸ್ಥೆಗೆ ಅಡಮಾನ ಇಟ್ಟು ಸಾಲ ಪಡೆದಿದೆ ಎಂದು ಅಬ್ದುಲ್ ಸತ್ತಾರ್ ಆರೋಪಿಸಿದ್ದಾರೆ. ಈ ಅಸ್ತಿ ವಿಚಾರದಲ್ಲಿ ಶ್ರೀಧರ ರೆಡ್ಡಿ, ಆದಿ ರೆಡ್ಡಿಯವರು ಇತರರೊಂದಿಗೆ ಸೇರಿಕೊಂಡು ತಮಗೆ ನಂಬಿಕೆದ್ರೋಹ ಎಸಗಿ ವಂಚಿಸಿದ್ದಾರೆ ಎಂದು ಅಬ್ದುಲ್ ಸತ್ತಾರ್ ಅವರು ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

